ರಾಮನಗರ: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕು ಎಂಬ ಬೇಡಿಕೆ ಇನ್ನೂ ತಣ್ಣಗಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ನಾಯಕನಿಗೆ ಅವಕಾಶ ನೀಡಬೇಕು ಎಂದು ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಮಾಗಡಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಇತರ ಕೆಲ ನಾಯಕರಂತೆ ಬಿಜೆಪಿ ಜೊತೆ ರಾಜಿ ಡಿಕೆಶಿ ಮಾಡಿಕೊಂಡಿದ್ರೆ ಇಷ್ಟೊತ್ತಿಗೆ ಎಲ್ಲಿರುತ್ತಿದ್ದರೋ ಗೊತ್ತಿಲ್ಲ. ಆದರೆ ಅವರು ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ತೊರೆದಿಲ್ಲ ಎಂದು ಹೇಳಿದರು.
1994ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಆ ವೇಳೆ ಜನತಾದಳ ಸರ್ಕಾರ ಅಧಿಕಾರಕ್ಕೆ ಬಂದಾಗ ಹಲವರು ಆ ಪಕ್ಷಕ್ಕೆ ಸೇರಿದರು. ಆದರೆ ಶಿವಕುಮಾರ್ ಯಾವುದೇ ಕಾರಣಕ್ಕೂ ಜೆಡಿಎಸ್ ಸೇರಲಿಲ್ಲ ಎಂದು ವಿವರಿಸಿದರು.
ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭ ಅವರನ್ನು ಪ್ರಕರಣದಲ್ಲಿ ಭಾಗಿಯಾದರೆಂದು ಆರೋಪಿಸಿ ಜೈಲಿಗೆ ಕಳುಹಿಸಲಾಯಿತು. ಇಷ್ಟೆಲ್ಲ ಸವಾಲುಗಳ ನಡುವೆಯೂ ಅವರು ಕಾಂಗೆಸ್ ಪಕ್ಷದಲ್ಲೇ ಉಳಿದುಕೊಂಡಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.
ಹೀಗಾಗಿ ನಮ್ಮ ನಾಯಕರಿಗೂ ಅವಕಾಶ ನೀಡಬೇಕು ಎಂದು ನಾವು ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ. ಡಿ.ಕೆ. ಶಿವಕುಮಾರ್ ಸಿಎಂ ಆದರೆ ನಮ್ಮ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಅದು ನಮ್ಮ ಸ್ವಾರ್ಥವೂ ಹೌದು ಎಂದು ಹೇಳಿದ್ದಾರೆ.



