ಕಲಬುರಗಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಡಿಕ್ಟೇಟರ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಾತೇ ಕೇಳುತ್ತಾ ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಟ್ರಂಪ್ ನನ್ನ ಸ್ನೇಹಿತ ಎಂದು ಮೋದಿ ಹೇಳುತ್ತಾರೆ. ಆದರೆ ಟ್ರಂಪ್ ಭಾರತ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಷ್ಯಾದಿಂದ ತೈಲ ಖರೀದಿಗೆ ಕೂಡ ಅಮೆರಿಕಾ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
“ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರವಿ ಇಟ್ಟಿದ್ದಾರೆ. ನೀವು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಬ್ರಿಟಿಷರನ್ನು ದೇಶದಿಂದ ಓಡಿಸಿದ್ದೇವೆ. ಆದರೆ ಈಗ ಅಮೆರಿಕಾಗೆ ಗುಲಾಮರನ್ನ ಮಾಡುತ್ತಿದ್ದೀರಿ” ಎಂದು ಖರ್ಗೆ ಕಿಡಿಕಾರಿದರು.
ಈ ವೇಳೆ ಜಾಗತಿಕ ರಾಜಕೀಯದ ಕುರಿತು ಮಾತನಾಡಿದ ಖರ್ಗೆ, “ಅಮೆರಿಕದವರು ಇರಾನ್ ದೇಶದ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದರೆ ವಿಶ್ವ ಶಾಂತಿ ಹೇಗೆ ಸಾಧ್ಯ? ಒಂದು ದೇಶದ ಮುಖ್ಯಸ್ಥನನ್ನು ಕೊಂದರೆ ಆ ದೇಶದಲ್ಲಿ ಶಾಂತಿ ಉಳಿಯುತ್ತದೆಯೇ?” ಎಂದು ಪ್ರಶ್ನಿಸಿದರು.
ಅದೇ ವೇಳೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಕಾಲದಲ್ಲಿ ಅನುಸರಿಸಲಾದ ‘ನಾನ್ ಅಲೈನ್ಮೆಂಟ್’ ನೀತಿಯನ್ನು ಉಲ್ಲೇಖಿಸಿದ ಅವರು, ಆ ನೀತಿಯೇ ವಿಶ್ವ ಶಾಂತಿಗೆ ಕಾರಣವಾಗಿತ್ತು ಎಂದು ಹೇಳಿದರು.
ಇನ್ನೂ ಕೃಷಿ ವಿಚಾರ ಪ್ರಸ್ತಾಪಿಸಿದ ಖರ್ಗೆ, “ಭಾರತದಲ್ಲಿ ಸುಮಾರು 65% ಜನರು ಕೃಷಿ ಅವಲಂಬಿತರಾಗಿದ್ದಾರೆ. ಆದರೆ ಅಮೆರಿಕಾದಲ್ಲಿ ಕೇವಲ 3% ಜನ ಮಾತ್ರ ಕೃಷಿ ಅವಲಂಬಿತರಾಗಿದ್ದಾರೆ. ಆದರೂ ಭಾರತ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ” ಎಂದು ಆರೋಪಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಸಂಬಂಧದ ಕುರಿತು ಗಂಭೀರ ಆರೋಪ ಮಾಡಿರುವ ಖರ್ಗೆ, “ಎಪ್ಸ್ಟೀನ್ ಫೈಲ್ಸ್ನಲ್ಲಿ ಮೋದಿ ಹೆಸರು ಇದೆ ಎನ್ನಲಾಗುತ್ತಿದೆ. ಅದನ್ನೇ ಬಳಸಿಕೊಂಡು ಟ್ರಂಪ್ ಮೋದಿಯನ್ನು ಹೆದರಿಸುತ್ತಿದ್ದಾರೆ” ಎಂದು ಹೇಳಿದರು.



