ಬೆಂಗಳೂರು: ಪೊಲೀಸ್ ಇಲಾಖೆಗೆ ಸೇರಿದ ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬೆಸ್ಕಾಂ, ಬಿಬಿಎಂಪಿ ಅಧಿಕಾರಿಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಲ್ಲೇಶ್ವರಂನ ಹಳೆಯ ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿಗೃಹಗಳಿರುವ ಈ ಜಾಗಕ್ಕೆ 100 ವರ್ಷಕ್ಕೂ ಅಧಿಕ ಇತಿಹಾಸವಿದೆ. 1913ರ ನಕ್ಷೆಯಲ್ಲಿಯೇ ಈ ಸ್ಥಳವನ್ನು ಪೊಲೀಸ್ ವಸತಿ ಪ್ರದೇಶವೆಂದು ಗುರುತಿಸಲಾಗಿದ್ದು, ಪ್ರಸ್ತುತವೂ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ.
ಈ ಪ್ರಕರಣವು ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್ಲಿನಲ್ಲಿ ‘ಮಹಾಲಕ್ಷ್ಮೀ’ ಎಂಬ ಖಾಸಗಿ ವ್ಯಕ್ತಿಯ ಹೆಸರು ಕಾಣಿಸಿಕೊಂಡ ಹಿನ್ನೆಲೆ ಬೆಳಕಿಗೆ ಬಂದಿದೆ. ಅನುಮಾನಗೊಂಡ ಅವರು ಸಂಬಂಧಿತ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಆಸ್ತಿ ದಾಖಲೆಗಳನ್ನು ಅಕ್ರಮವಾಗಿ ಮಹಾಲಕ್ಷ್ಮೀ ಹೆಸರಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಇದೇ ವೇಳೆ, ಬಿಬಿಎಂಪಿ ಮೂಲಕ ಇ-ಖಾತಾವನ್ನೂ ಅಕ್ರಮವಾಗಿ ಮಾಡಿಸಿಕೊಂಡಿರುವುದು ಹಾಗೂ ಕೃಷ್ಣಮೂರ್ತಿ ಎಂಬಾತನಿಗೆ ಜಾಗ ಮಾರಾಟ ಮಾಡಲು ಒಪ್ಪಂದ ಪತ್ರ ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇನ್ನೂ, “ಅಧಿಕಾರಿಗಳು ಇದ್ದರೂ ಜಾಗ ಖಾಲಿ ಮಾಡಿಸುತ್ತೇವೆ” ಎಂದು ಆರೋಪಿಗಳಿಂದ ಬೆದರಿಕೆ ಹಾಕಲಾಗಿದೆ ಎಂಬುದೂ ತಿಳಿದುಬಂದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



