ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಾವಣಗೆರೆಯ ಎಂ.ಬಿ.ಎ ಕಾಲೇಜು ಆವರಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿದ್ದು,
ಬಿಜೆಪಿಯವರ ಸುಳ್ಳುಗಳ ನಡುವೆಯೂ ಜನ ನಮ್ಮನ್ನು ನಂಬಿದ್ದಾರೆ. ರಾಜ್ಯದಲ್ಲಿ ಯಾವುದೇ ಚುನಾವಣೆಯ ನಂತರ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರೂ, ನಮ್ಮ ಗ್ಯಾರಂಟಿಗಳು ನಿರಂತರವಾಗಿ ಮುಂದುವರಿದಿದೆ. ಇದಕ್ಕಾಗಿ 52000 ಕೋಟಿ ಮೀಸಲಿಟ್ಟಿದ್ದು, ಇದುವರೆಗೆ 1,31,000 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಬದ್ಧ ಅನುದಾನ ದೊರೆತಿಲ್ಲ
ಸಾಲದ ರಾಮಯ್ಯ ಎಂದು ತನ್ನನ್ನು ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ಮಿತಿಯೊಳಗೆ ಸಾಲ ಮಾಡಬೇಕು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡದಂತೆ, ರಾಜ್ಯದ ಜಿಡಿಪಿಯ ಶೇ. 25 ರ ಮಿತಿಯೊಳಗೆ ಸಾಲದ ಮೊತ್ತವಿದೆ.
ನಮ್ಮ ವಿತ್ತೀಯ ಕೊರತೆ 2.95 ರಷ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಬದ್ಧ ಅನುದಾನಗಳು ಬರದ ಕಾರಣ, ರೆವಿನ್ಯೂ ಸರ್ಪ್ಲಸ್ ಸಾಧಿಸಲು ಸಾಧ್ಯವಾಗಲಿಲ್ಲ. ಬಿಹಾರ ಚುನಾವಣೆಯ ಸಂಬಂಧ ಜಿಎಸ್ ಟಿ ದರವನ್ನು ಕಡಿತಗೊಳಿಸಿದರು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 10,000 ಕೋಟಿ ನಷ್ಟವಾಗಿದೆ. ಜಿಎಸ್ ಟಿ ಕಡಿತದ ಮುಂಚೆ 10% ಇದ್ದ ಜಿಎಸ್ ಟಿ ಬೆಳವಣಿಗೆ ಈಗ ಶೇ. 4 ಕ್ಕೆ ಕುಸಿದಿದೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪರಿಹಾರವನ್ನು ಮತ್ತು ವಿಶೇಷ ಅನುದಾನಗಳನ್ನು ನೀಡದ ಕಾರಣ ಬಜೆಟ್ ರೆವಿನ್ಯೂ ಸರ್ಪ್ಲಸ್ ಆಗಲು ಸಾಧ್ಯವಾಗಿಲ್ಲ. ಆರ್ಥಿಕತೆಗೆ ಶ್ವೇತಪತ್ರ ಮಂಡಿಸಬೇಕು ಎಂದು ಹೇಳುವ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ರವರು ಈ ಎಲ್ಲ ಅಂಶಗಳನ್ನು ಪರಿಶೀಲಿಸದೇ, ಕೇವಲ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಗ್ಯಾರಂಟಿಗಳಲ್ಲಿ ಭ್ರಷ್ಠಾಚಾರಕ್ಕೆ ಆಸ್ಪದವಿಲ್ಲ
ಮಾಜಿ ಸಿಎಂ ಬೊಮ್ಮಾಯಿಯವರು ರಾಜ್ಯದ ಸಾಲದ ದಾಖಲೆಗಳನ್ನು ಸರ್ಕಾರ ನೀಡಲೆಂದು ಹೇಳಿರುವ ಬಗ್ಗೆ ಉತ್ತರಿಸಿ, ಆರ್ಥಿಕತೆಯ ಸ್ಥಿತಿಗತಿಗಳ ಎಲ್ಲ ಅಂಶಗಳ ದಾಖಲೆಗಳನ್ನು ಬಜೆಟ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬಿಜೆಪಿಯವರ ಅವಧಿಯಲ್ಲಿ 530000 ಕೋಟಿ ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಯು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿ , ಇದರಲ್ಲಿ ಭ್ರಷ್ಠಾಚಾರಕ್ಕೆ ಆಸ್ಪದವಿಲ್ಲ ಎಂದರು.



