ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ಭೇಟಿ ಮಾಡಿ ಹೊರಬಂದ ನಟ ಧನ್ವೀರ್ ಗೌಡ, ತಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇತ್ತೀಚೆಗೆ ಹರಿದಾಡುತ್ತಿದ್ದ ಮನಸ್ತಾಪದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧನ್ವೀರ್, “ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಯಾರು ಹೇಳಿದ್ದು? ಅವರನ್ನೇ ಕರೆದುಕೊಂಡು ಬನ್ನಿ. ಮನಸ್ತಾಪ ಇದ್ದಿದ್ದರೆ ಅವರನ್ನು ಭೇಟಿ ಮಾಡಲು ನಾನು ಜೈಲಿಗೆ ಬರುತ್ತಿದ್ದೇನಾ?” ಎಂದು ಪ್ರಶ್ನಿಸಿದ್ದಾರೆ.
ದರ್ಶನ್ ಅವರು ಆರಾಮವಾಗಿದ್ದಾರೆ ಎಂದು ತಿಳಿಸಿದ ಧನ್ವೀರ್, ಮನಸ್ತಾಪದ ಕುರಿತು ಹರಿದಾಡುತ್ತಿದ್ದ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.
ಇದೇ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ತಾಯಿ ಮೀನಾ ತೂಗುದೀಪ ಕೂಡ ಜೈಲಿಗೆ ಭೇಟಿ ನೀಡಿದ್ದರು. ವಿಜಯಲಕ್ಷ್ಮಿ ಮತ್ತು ಧನ್ವೀರ್ ಇಬ್ಬರೂ ಒಂದೇ ಸಮಯದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿರುವುದು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ಇತ್ತೀಚೆಗೆ ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವೆ ಮನಸ್ತಾಪವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇಬ್ಬರೂ ಪ್ರತ್ಯೇಕವಾಗಿ ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ರೀತಿಯ ಊಹಾಪೋಹಗಳು ಹರಿದಾಡಿದ್ದವು.
ಆದರೆ ಇದೀಗ ಇಬ್ಬರೂ ಒಂದೇ ಸಮಯದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿರುವುದು ಹಾಗೂ ಧನ್ವೀರ್ ಬಹಿರಂಗವಾಗಿ ಯಾವುದೇ ಮನಸ್ತಾಪವಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.



