ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲೇ, ಜನಪ್ರತಿನಿಧಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಗ್ಯಾಸ್ ಸಿಲಿಂಡರ್ ಪಡೆಯಲು ಆಟೋ ಚಾಲಕರು ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಶಾಸಕರು ಐಪಿಎಲ್ ಟಿಕೆಟ್ಗಾಗಿ ತಮ್ಮ ಪಿಎಗಳನ್ನು ಸಾಲಿನಲ್ಲಿ ನಿಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಹಿನ್ನೆಲೆಯಲ್ಲಿ, ಪ್ರತಿ ಪಂದ್ಯಕ್ಕೂ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಸರ್ಕಾರ ಮತ್ತು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡುವೆ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಳೆ ನಡೆಯಲಿರುವ ಬೆಂಗಳೂರು-ಚೆನ್ನೈ ಪಂದ್ಯಕ್ಕಾಗಿ, ಶಾಸಕರ ಸೂಚನೆಯ ಮೇರೆಗೆ ಅವರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತು ಟಿಕೆಟ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಜನಸಾಮಾನ್ಯರ ಸಮಸ್ಯೆಗಳಿಗಿಂತ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಜನಪ್ರತಿನಿಧಿಗಳ ಈ ನಡೆ ವಿರೋಧಕ್ಕೆ ಗುರಿಯಾಗಿದೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸ್ಪಂದನೆ ನೀಡದೇ, ಮನರಂಜನೆಗಾಗಿ ಈ ರೀತಿಯ ವರ್ತನೆ ತೋರಿರುವುದು ವಿಪರ್ಯಾಸ ಎಂದು ಟೀಕೆಗಳು ಕೇಳಿಬರುತ್ತಿವೆ.



