ಹುಬ್ಬಳ್ಳಿ: ಜೈಲಿನಲ್ಲಿ ಖೈದಿಗಳಿಗೆ ರಾಜಾಥಿತ್ಯ ನೀಡಲಾಗುತ್ತಿದೆಯೇ. ಕಂಬಿಗಳ ಹಿಂದೆ ಇದ್ದರು ಮೊಬೈಲ್ ಬಳಸಲು ಅನುಮತಿ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಮತ್ತೊಮ್ಮೆ ಹುಟ್ಟಿಕೊಂಡಿದೆ. ಇದೀಗ ರಾಜ್ಯದ ಜೈಲು ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತೊಂದು ಅಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಉಪ ಕಾರಾಗೃಹದ ಬ್ಯಾರಕ್ ಸಂಖ್ಯೆ 8ರಲ್ಲಿ ತಪಾಸಣೆ ನಡೆಸಿದಾಗ ಸ್ಮಾರ್ಟ್‌ಫೋನ್‌ಗಳು, ಚಾರ್ಜರ್‌ಗಳು ಮತ್ತು ಕನೆಕ್ಟರ್‌ಗಳು ಪತ್ತೆಯಾಗಿವೆ. ಆದರೆ, “ಇದು ಯಾರದ್ದು?” ಎಂಬ ಪ್ರಶ್ನೆಗೆ ಯಾರೂ ಉತ್ತರಿಸದೇ ಇರುವುದೇ ಮತ್ತಷ್ಟು ಸಂಶಯ ಹುಟ್ಟಿಸಿದೆ.
ಈ ಹಿನ್ನೆಲೆಯಲ್ಲಿ ಬ್ಯಾರಕ್‌ನಲ್ಲಿದ್ದ 13 ಕೈದಿಗಳ ವಿರುದ್ಧ FIR ದಾಖಲಾಗಿದ್ದು, ಪ್ರಕರಣ ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೂ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದ ಘಟನೆ ಇನ್ನೂ ಮಾಸಿಲ್ಲ. ಜಾಮರ್ ಇದ್ದರೂ ನೆಟ್‌ವರ್ಕ್ ಸಿಗುತ್ತಿರುವುದು, ಸಿಬ್ಬಂದಿಯ ಶಾಮೀಲು ಇರುವ ಶಂಕೆ ಮೂಡಿಸಿದೆ.
ಈ ನಡುವೆ ಹುಬ್ಬಳ್ಳಿಯಲ್ಲೂ ಮೊಬೈಲ್ ಪತ್ತೆಯಾಗಿರುವುದು, “ಜೈಲುಗಳಲ್ಲಿ ರಾಜಾತಿಥ್ಯ ಮುಂದುವರಿದೇ?” ಎಂಬ ಪ್ರಶ್ನೆಯನ್ನು ಮತ್ತೆ ಎಬ್ಬಿಸಿದೆ. ಇದೀಗ ಈ ಪ್ರಕರಣ ಜೈಲು ವ್ಯವಸ್ಥೆಯ ದುರ್ಬಲತೆಗಳನ್ನು ಬಹಿರಂಗಪಡಿಸುತ್ತಿದೆ.



