ಮಂಗಳೂರು: ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್ (22) ಆತ್ಮಹತ್ಯೆ ಪ್ರಕರಣ ಇದೀಗ ಗಂಭೀರ ಕಾನೂನು ತನಿಖೆಗೆ ಒಳಪಟ್ಟಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ, ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 21ರಂದು ಈದ್ ಹಬ್ಬದ ದಿನವೇ ಆಶಿಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ವೈಯಕ್ತಿಕ ಕಾರಣ ಅಥವಾ ಮನನೊಂದು ತೆಗೆದುಕೊಂಡ ನಿರ್ಧಾರವಾಗಿರಬಹುದು ಎಂದು ಅಂದಾಜಿಸಲಾಗಿತ್ತಾದರೂ, ನಂತರ ನಡೆದ ಡಿಜಿಟಲ್ ಸಾಕ್ಷ್ಯ ಪರಿಶೀಲನೆಯಿಂದ ಪ್ರಕರಣದ ದಿಕ್ಕು ಬದಲಾಗಿದೆ.
ಮೊಬೈಲ್ ಚಾಟ್‌ಗಳು, ಕರೆ ದಾಖಲೆಗಳು ಹಾಗೂ ವಿಡಿಯೋ ಕಾಲ್ ವಿವರಗಳ ಪರಿಶೀಲನೆಯ ಬಳಿಕ ಪ್ರೇಮ ಸಂಬಂಧ ಹಾಗೂ ಮಾನಸಿಕ ಒತ್ತಡದ ಅಂಶಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಶಿಕ್ ಕಾಲೇಜು ಸಹಪಾಠಿಯಾಗಿದ್ದ ಉಳ್ಳಾಲ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಆರಂಭದಲ್ಲಿ ಸಂಬಂಧ ಎರಡೂ ಕುಟುಂಬಗಳಿಗೆ ತಿಳಿದಿದ್ದರೂ, ಬಳಿಕ ಯುವತಿ ದೂರವಾಗಿದ್ದ ಹಿನ್ನೆಲೆಯಲ್ಲಿ ಮನಸ್ಥಿತಿ ಕುಸಿತ ಕಂಡಿತ್ತು ಎನ್ನಲಾಗಿದೆ.
ತನಿಖಾ ಮಾಹಿತಿಯ ಪ್ರಕಾರ, ಸಾವಿಗೂ ಮುನ್ನ ಇಬ್ಬರ ನಡುವೆ ನಡೆದ ಸಂಭಾಷಣೆಗಳಲ್ಲಿ ತೀವ್ರ ನಿಂದನೆ ಹಾಗೂ ಮನೋವೈಕಲ್ಯ ಉಂಟುಮಾಡುವ ರೀತಿಯ ಮಾತುಕತೆಗಳು ನಡೆದಿದ್ದವು ಎಂಬ ಆರೋಪವಿದೆ. ಇದೇ ಹಿನ್ನೆಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮೃತನ ತಂದೆಯ ದೂರು ಆಧರಿಸಿ ಕಾವೂರು ಪೊಲೀಸರು ಬಿಎನ್‌ಎಸ್ ಸೆಕ್ಷನ್ 108, 352, 351(3), 3(5) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪಾತ್ರ ಹಾಗೂ ಡಿಜಿಟಲ್ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.



