ಬೆಂಗಳೂರು: ನಗರದ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು “ಡಬಲ್ ಹಣ” ಆಮಿಷದಡಿ ಭಾರೀ ವಂಚನೆ ನಡೆದಿರುವುದು ಬಹಿರಂಗವಾಗಿದೆ. ಕ್ರಿಸ್ಟಲ್ ಎಐ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ, ನೂರಾರು ಮಂದಿಯಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ಈ ಪ್ರಕರಣ ಸಂಬಂಧ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರೋಬೋಟ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ಕಡಿಮೆ ಅವಧಿಯಲ್ಲಿ ಡಬಲ್ ಮಾಡಿಕೊಡಲಾಗುತ್ತದೆ ಎಂದು ನಂಬಿಸಿ ಜನರನ್ನು ಸೆಳೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ 5ರಿಂದ 6 ಕೋಟಿ ರೂಪಾಯಿ ವಂಚನೆ ನಡೆದಿರುವುದು ತಿಳಿದುಬಂದಿದ್ದರೂ, ನಿಜವಾದ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.



