ಬೀದರ್: ಬೀದರ್ ಜಿಲ್ಲೆ ಯಲ್ಲಿ ಮುಂದುವರಿದ ಭೀಕರ ಉಷ್ಣ ಅಲೆಯ ನಡುವೆ ಹೀಟ್ ಸ್ಟ್ರೋಕ್ಗೆ ಯುವಕನೊಬ್ಬ ಬಲಿಯಾದ ಘಟನೆ ನಡೆದಿದೆ. ಕಮಲನಗರ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದ ಈ ಘಟನೆ ಪ್ರದೇಶದಲ್ಲಿ ಆತಂಕವನ್ನು ಹೆಚ್ಚಿಸಿದೆ.
ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಲಯಿಕ್ ಅಹ್ಮದ್ (20) ಸ್ಥಳೀಯ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರು. ಜಿಲ್ಲೆಯಲ್ಲಿ ತಾಪಮಾನ ನಿರಂತರವಾಗಿ 45 ಡಿಗ್ರಿ ಸೆಲ್ಸಿಯಸ್ ಸಮೀಪಕ್ಕೆ ಏರಿಕೆಯಾಗಿದ್ದು, ಬಿಸಿಲಿನ ತೀವ್ರತೆಯಿಂದ ಜನರು ಮನೆಬಿಟ್ಟು ಹೊರಬರುವುದು ಕಷ್ಟಕರವಾಗಿತ್ತು.
ಘಟನೆಯ ದಿನ ಸಮೀರ್ ತೀವ್ರ ಬಿಸಿಲಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ತಲೆ ಸುತ್ತು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಮಾರ್ಗ ಮಧ್ಯೆ ಸ್ಥಳೀಯ ಅಂಗಡಿಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದರೂ, ನಂತರ ಹೆದ್ದಾರಿ ಬಳಿಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ನೆರವಿಗೆ ಧಾವಿಸಿದರೂ ಜೀವ ಉಳಿಸಲಾಗಲಿಲ್ಲ.
ಪೊಲೀಸರ ಪ್ರಾಥಮಿಕ ಶಂಕೆಯಂತೆ ಇದು ಹೀಟ್ ಸ್ಟ್ರೋಕ್ ಕಾರಣದಿಂದ ಸಂಭವಿಸಿದ ಸಾವು. ಮರಣೋತ್ತರ ಪರೀಕ್ಷೆಯ ವರದಿ ನಂತರ ಸ್ಪಷ್ಟತೆ ಸಿಗಲಿದೆ. ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆಯಲ್ಲಿ ಹೊರಗೆ ಹೋಗದಂತೆ ಹಾಗೂ ಸಾಕಷ್ಟು ನೀರು ಸೇವಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.



