ಮಂಡ್ಯ: ಐಪಿಎಲ್ ಬೆಟ್ಟಿಂಗ್ ಚಟದಿಂದ ಉಂಟಾದ ಭಾರೀ ಸಾಲದ ಒತ್ತಡಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ತರೀಕೆರೆ ಗ್ರಾಮದ ನಿರೂಪ್ (28) ಮೃತ ಯುವಕನಾಗಿದ್ದಾನೆ. ಇವರು ಕೊಪ್ಪದ ಬೆಳ್ಳೇಕರೆ ವೃತ್ತದ ಬಳಿ ದಿನಸಿ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಐಪಿಎಲ್ ಬೆಟ್ಟಿಂಗ್‌ಗೆ ಒಳಗಾದ ನಿರೂಪ್ ಸುಮಾರು ₹50 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ. ಸಾಲದ ಒತ್ತಡ ಮತ್ತು ಭಯದಿಂದ ಮನನೊಂದು, ರಾತ್ರಿ ವೇಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



