ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ಮಹಿಳೆಯೊಬ್ಬರು ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಈ ಸಾವು ಕೇವಲ ಆಕಸ್ಮಿಕವೋ ಅಥವಾ ಹಿಂದೆ ಯಾವುದಾದರೂ ಸಂಚು ಇದ್ದಿರಬಹುದೋ ಎಂಬ ಅನುಮಾನಗಳು ಈಗ ಗಂಭೀರವಾಗಿವೆ.
ಮೃತರನ್ನು ಸುಜಾತ (30) ಎಂದು ಗುರುತಿಸಲಾಗಿದೆ. ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ, ಸುಮಾರು 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಅವರನ್ನು ವಿವಾಹವಾಗಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಇಂದು ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ ಬಳಸುವಾಗ ಸುಜಾತ ಅವರಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ತಕ್ಷಣ ಅವರನ್ನು ವಿಪಿ ಮಾಗ್ನಸ್ ಆಸ್ಪತ್ರೆಗೆ ಕರೆದೊಯ್ಯಲಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಆದರೆ ಈ ಸಾವು ಬಗ್ಗೆ ಮೃತರ ಪೋಷಕರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ಮಗಳ ಸಾವಿನ ಹಿಂದೆ ಅಳಿಯ ಚೇತನ್ ಕೈವಾಡ ಇರಬಹುದೆಂದು ಅವರು ಆರೋಪಿಸಿದ್ದಾರೆ. ಮದುವೆಯಾದ ನಂತರ ದಂಪತಿಗಳ ನಡುವೆ ನಿರಂತರ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು, ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಇದಾದ ನಂತರ ಚೇತನ್ ಹಾಗೂ ಅವರ ತಾಯಿ ಸುಜಾತ ಅವರನ್ನು ಮನವೊಲಿಸಿ ಕೇವಲ ಒಂದು ವಾರದ ಹಿಂದೆ ಗೌಡಹಳ್ಳಿಗೆ ಕರೆತಂದಿದ್ದರು ಎಂದು ಹೇಳಲಾಗುತ್ತಿದೆ. ಮನೆಗೆ ಬಂದ ಕೆಲವೇ ದಿನಗಳಲ್ಲಿ ಇಂತಹ ಘಟನೆ ಸಂಭವಿಸಿರುವುದು ಕುಟುಂಬದಲ್ಲಿ ಅನುಮಾನ ಹೆಚ್ಚಿಸಿದೆ.
ಸದ್ಯ ಮೃತದೇಹವನ್ನು ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವರದಿ ಬಂದ ನಂತರವೇ ಇದು ಆಕಸ್ಮಿಕ ಸಾವು ಅಥವಾ ಬೇರೆ ಕಾರಣವೋ ಎಂಬುದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.



