ಬೆಂಗಳೂರು: ತುಮಕೂರು ರಸ್ತೆ ಮತ್ತು ಪೀಣ್ಯ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಪ್ರಮುಖ ಸೂಚನೆ ನೀಡಲಾಗಿದೆ.
ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಇಂದಿನಿಂದ ಮುಂದಿನ 4 ದಿನಗಳ ಕಾಲ ಸಂಪೂರ್ಣ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.
ಮೇ 5ರ ಬೆಳಗ್ಗೆ 5 ಗಂಟೆಯಿಂದ ಮೇ 8ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಸಂಚಾರ ಸ್ಥಗಿತವಾಗಿದ್ದು, ಕೇಬಲ್ ಅಳವಡಿಕೆ ದುರಸ್ತಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಕಾಮಗಾರಿ ನಡೆಯಲಿದೆ. ಸಾರ್ವಜನಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ನೆಲಮಂಗಲದಿಂದ ಬೆಂಗಳೂರು ನಗರಕ್ಕೆ ಹಾಗೂ ಬೆಂಗಳೂರು ನಗರದಿಂದ ನೆಲಮಂಗಲ ಕಡೆಗೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ. ಸರ್ವಿಸ್ ರಸ್ತೆ ಮತ್ತು ಪೀಣ್ಯ–ದಾಸರಹಳ್ಳಿ–ಜಾಲಹಳ್ಳಿ ಕ್ರಾಸ್ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರು ಸಮಯಕ್ಕಿಂತ ಮುಂಚಿತವಾಗಿ ಪ್ರಯಾಣ ಆರಂಭಿಸುವಂತೆ ಹಾಗೂ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ಈ ಹಿಂದೆ ಮುಂದೂಡಲಾಗಿದ್ದ ಕಾಮಗಾರಿ ಇದೀಗ ಆರಂಭವಾಗಿರುವುದರಿಂದ ಸುತ್ತಮುತ್ತಲಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.



