ಬೆಂಗಳೂರು: ದೇಶದ ಬಂಡವಾಳ ಹೂಡಿಕೆಗಳಿಂದ ಹಿಡಿದು ಐಪಿಎಲ್ ಪಂದ್ಯಗಳವರೆಗೆ ಎಲ್ಲವೂ ಗುಜರಾತ್‌ಗೆ ಕೇಂದ್ರೀಕೃತವಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಗೊಂಡ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಐಪಿಎಲ್ ಪಂದ್ಯಗಳನ್ನೂ ಗುಜರಾತ್‌ಗೆ ಕೊಂಡೊಯ್ಯಲಾಗುತ್ತಿದೆ. ದೇಶದ ಬಂಡವಾಳವೂ ಅಲ್ಲಿಗೆ ಹರಿದು ಹೋಗುತ್ತಿದೆ. ಬಿಸಿಸಿಐ ಮತ್ತು ಐಸಿಸಿಯಲ್ಲಿ ಜಯ್ ಶಾ ಇದ್ದಾರೆ. ಅವರಿಗೆ ಇಷ್ಟ ಬಂದಂತೆ ನಿರ್ಧಾರ ಮಾಡುತ್ತಾರೆ. ಬೆಂಗಳೂರಿನಿಂದ ಪಂದ್ಯವನ್ನು ಎತ್ತಿ ಹೈದರಾಬಾದ್‌ಗೆ ಅಥವಾ ಗುಜರಾತ್‌ಗೆ ಸ್ಥಳಾಂತರಿಸುತ್ತಾರೆ. ಇಲ್ಲಿ ಭದ್ರತೆ ಇಲ್ಲವೇ? ಹಾಗಿದ್ದರೆ ಪಂದ್ಯ ಯಾಕೆ ಶಿಫ್ಟ್ ಮಾಡಲಾಗಿದೆ? ಎಂದು ಪ್ರಶ್ನಿಸಿದರು.
ಹೂಡಿಕೆ ಯೋಜನೆಗಳ ವಿಷಯದಲ್ಲೂ ಗುಜರಾತ್‌ಗೆ ಅನಗತ್ಯ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಗುಜರಾತ್‌ಗೆ ಆರು ಸೆಮಿಕಂಡಕ್ಟರ್ ಯೋಜನೆಗಳು ಹೋಗಿವೆ. ಕಂಪನಿಗಳು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವಾಗ ಮೊದಲ ಆದ್ಯತೆಯ ರಾಜ್ಯವಾಗಿ ಕರ್ನಾಟಕ ಅಥವಾ ತಮಿಳುನಾಡನ್ನು ನಮೂದಿಸಿದ್ದರೂ, ಅಂತಿಮವಾಗಿ ಯೋಜನೆಗಳು ಗುಜರಾತ್ ಅಥವಾ ಅಸ್ಸಾಂಗೆ ಹೋಗುತ್ತಿವೆ. ಇದು ಹೇಗೆ ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು.



