ರಾಮನಗರ: ಕನಕಪುರ ನಗರದ ನವೋದಯ ಆಸ್ಪತ್ರೆ ಸುತ್ತ ಭಾರೀ ಅನುಮಾನ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಯ ವೈದ್ಯ ಡಾ. ಚೇತನ್ ಟೆಂಕರ್ ಆತ್ಮಹತ್ಯೆ ಮಾಡಿಕೊಂಡು ಕೇವಲ ಎರಡು ದಿನಗಳಲ್ಲೇ ಅದೇ ಆಸ್ಪತ್ರೆಯ ನರ್ಸ್ ಸರಸ್ವತಿ ಕೂಡ ನೇಣಿಗೆ ಶರಣಾಗಿದ್ದಾರೆ.
ಮಹದೇಶ್ವರ ಬಡಾವಣೆಯ ಮನೆಯಲ್ಲಿ ನರ್ಸ್ ಸರಸ್ವತಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಡಾ. ಚೇತನ್ ಕುಟುಂಬ ಕಲಹದ ಹಿನ್ನೆಲೆ ಜೀವ ಅಂತ್ಯಗೊಳಿಸಿಕೊಂಡಿದ್ದರು. ಇದೀಗ ಅವರೊಂದಿಗೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ನರ್ಸ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಸ್ಥಳೀಯ ಮೂಲಗಳ ಪ್ರಕಾರ, ವೈದ್ಯ ಮತ್ತು ನರ್ಸ್ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಈ ಕುರಿತು ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕನಕಪುರ ಟೌನ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ಇಬ್ಬರ ಸಾವಿನ ನಡುವಿನ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



