ಕೇರಳ: ಕೇರಳದಿಂದ ತಮಿಳುನಾಡಿಗೆ ತೆರಳುತ್ತಿದ್ದ ಪಲರುವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಕೊಲ್ಲಂ ಮೂಲದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತನ್ನ ಅಜ್ಜನೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ನಿದ್ದೆಯಲ್ಲಿದ್ದ ಬಾಲಕಿ ಮೇಲೆ ಆರೋಪಿಯು ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯನ್ನು ರೈಲಿನಲ್ಲಿ ಇದ್ದ ಮಹಿಳೆಯೊಬ್ಬರು ಗಮನಿಸಿ ವಿಡಿಯೋ ಮಾಡಿ ತಕ್ಷಣ ಎಚ್ಚರಿಕೆ ನೀಡಿದ್ದಾರೆ.
ರೈಲು ತಮಿಳುನಾಡು ಗಡಿ ಪ್ರವೇಶಿಸುವ ವೇಳೆಗೆ ಆರೋಪಿ ಸೆಂಗೊಟ್ಟೈ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದ. ಬಳಿಕ ಪುನಲೂರು ರೈಲ್ವೆ ಪೊಲೀಸರು ವಿಡಿಯೋ ಸಾಕ್ಷ್ಯ ಹಾಗೂ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.



