ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆಹಚ್ಚುವ AI ಕ್ಯಾಮರಾ ಮಾಡಿದ ಎಡವಟ್ಟೊಂದು ಇದೀಗ ಚರ್ಚೆಗೆ ಕಾರಣವಾಗಿದೆ. ಹೆಲ್ಮೆಟ್ ಹಾಕಿಲ್ಲ ಎಂದು ಬೈಕ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್‌ಗೇ ₹500 ದಂಡ ವಿಧಿಸಲಾಗಿದೆ!
ಸೌವಿಕ್ ದತ್ತ ಎಂಬುವವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೆಬ್ಬಾಳದ ಟಿನ್ ಫ್ಯಾಕ್ಟರಿ ಟ್ರಾಫಿಕ್ ಸಿಗ್ನಲ್ ಬಳಿ ಅಳವಡಿಸಲಾಗಿರುವ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಬೈಕ್‌ನ ಹಿಂಭಾಗದಲ್ಲಿ ಸವಾರ ಕುಳಿತಿದ್ದಾನೆ ಎಂದು AI ಕ್ಯಾಮರಾ ತಪ್ಪಾಗಿ ಗುರುತಿಸಿದೆ. ಆದರೆ, ಅಲ್ಲಿ ಇದ್ದದ್ದು ಸವಾರನಲ್ಲ, ಸೌವಿಕ್ ದತ್ತ ಅವರ ಬೆನ್ನಿಗೆ ಹಾಕಿಕೊಂಡಿದ್ದ ಗಿಟಾರ್ ಬ್ಯಾಗ್!
ಗಿಟಾರ್ ಬ್ಯಾಗ್ ಅನ್ನು ಸವಾರನ ತಲೆಯ ಭಾಗವೆಂದು ತಪ್ಪಾಗಿ ಗುರುತಿಸಿದ AI ಕ್ಯಾಮರಾ, ಹೆಲ್ಮೆಟ್ ಧರಿಸಿಲ್ಲ ಎಂದು ₹500 ದಂಡ ವಿಧಿಸಿ ಆನ್‌ಲೈನ್‌ನಲ್ಲಿ ಚಲನ್ ಅಪ್‌ಲೋಡ್ ಮಾಡಿದೆ.
ಇನ್ನು, ಈ ದಂಡದ ಮೆಸೇಜ್ ಸೌವಿಕ್ ದತ್ತ ಅವರ ಪತ್ನಿಯ ಮೊಬೈಲ್‌ಗೆ ತಲುಪಿದೆ. ಚಲನ್ ನೋಡಿ ಅನುಮಾನಗೊಂಡ ಕುಟುಂಬಸ್ಥರು ಪರಿಶೀಲನೆ ನಡೆಸಿದಾಗ AI ಕ್ಯಾಮರಾದ ಎಡವಟ್ಟು ಬಯಲಾಗಿದೆ.
ಹೆಲ್ಮೆಟ್ ಇಲ್ಲದ ‘ಗಿಟಾರ್ ಸವಾರ’ ಎಂದು ತಪ್ಪಾಗಿ ಗುರುತಿಸಿ ದಂಡ ವಿಧಿಸಿರುವ ಘಟನೆ ಇದೀಗ AI ಆಧಾರಿತ ಟ್ರಾಫಿಕ್ ಕ್ಯಾಮರಾಗಳ ಕಾರ್ಯವೈಖರಿ ಕುರಿತು ಚರ್ಚೆ ಹುಟ್ಟುಹಾಕಿದೆ.
ತಂತ್ರಜ್ಞಾನದಿಂದ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚುವ ವ್ಯವಸ್ಥೆಯಲ್ಲಿ ಇಂತಹ ತಪ್ಪುಗಳು ಸಂಭವಿಸಿದರೆ, ದಂಡ ವಿಧಿಸುವ ಮೊದಲು ಮಾನವ ಪರಿಶೀಲನೆ ಅಗತ್ಯವೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.



