ಬೀದರ್: ಸರ್ಕಾರಿ ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೇಟ್ ಬಂದ್ ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಕ್ಲಾಸ್ ತೆಗೆದುಕೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ. ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ, ತಡವಾಗಿ ಬಂದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಸಿಇಒ ಮೊದಲು ವಿವಿಧ ವಿಭಾಗಗಳಿಗೆ ತೆರಳಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಈ ವೇಳೆ ಹಲವು ಕುರ್ಚಿಗಳು ಖಾಲಿಯಾಗಿರುವುದನ್ನು ಗಮನಿಸಿ ಸಿಬ್ಬಂದಿಯ ಹಾಜರಾತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಕಚೇರಿಯ ಗೇಟ್ ಬಳಿ ನಿಂತ ಸಿಇಒ, ತಡವಾಗಿ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಲ್ಲಿಯೇ ಪ್ರಶ್ನಿಸಿದ್ದಾರೆ.
ಕರ್ತವ್ಯ ಆ್ಯಪ್ ಬಳಕೆ ಕಡ್ಡಾಯವಾಗಿದ್ದರೂ ಸರಿಯಾದ ಸಮಯಕ್ಕೆ ಕಚೇರಿಗೆ ಬಾರದಿರುವುದೇಕೆ ಎಂದು ಸಿಬ್ಬಂದಿಯನ್ನು ಸಿಇಒ ಪ್ರಶ್ನಿಸಿದ್ದಾರೆ. ಫೀಲ್ಡ್ ವರ್ಕ್‌ಗೆ ತೆರಳಿದ್ದರೆ ಅದರ ಮಾಹಿತಿಯನ್ನು ಕರ್ತವ್ಯ ಆ್ಯಪ್‌ನಲ್ಲಿ ಯಾಕೆ ನಮೂದಿಸಿಲ್ಲ ಎಂದೂ ಕೇಳಿದ್ದಾರೆ. ತಡವಾಗಿ ಬಂದಿರುವುದಕ್ಕೆ ಕೆಲ ಸಿಬ್ಬಂದಿಯಿಂದ ಸಮಂಜಸ ಉತ್ತರ ಸಿಗದ ಹಿನ್ನೆಲೆಯಲ್ಲಿ ಸಿಇಒ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಚೇರಿಗೆ ಸರಿಯಾದ ಸಮಯಕ್ಕೆ ಹಾಜರಾಗದ ಹಾಗೂ ಕರ್ತವ್ಯದ ಕುರಿತು ಸೂಕ್ತ ಮಾಹಿತಿ ನೀಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಒಂದು ದಿನದ ಸಂಬಳ ಕಡಿತಗೊಳಿಸುವುದಾಗಿ ಸಿಇಒ ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸಮಯ ಪಾಲನೆ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂಬ ಸಂದೇಶವನ್ನೂ ಸಿಬ್ಬಂದಿಗೆ ನೀಡಿದ್ದಾರೆ.
ಇದೀಗ ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ತಡವಾಗಿ ಬಂದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

