ವಿಜಯಪುರ: ಜಿಲ್ಲಾ ಪೊಲೀಸರು ಸಮಾಜಮುಖಿ ಕಾರ್ಯದ ಮೂಲಕ ಹೊಸ ಮಾದರಿ ನಿರ್ಮಿಸಿದ್ದಾರೆ. ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದ 73 ಮಂದಿ ವೃದ್ಧರು ಮತ್ತು ಒಂಟಿ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಟ್ಟು ‘ಆಸರೆ’ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.
ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿದ ಪೊಲೀಸರು, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ಪಿಂಚಣಿ, ಸಂಧ್ಯಾ ಸುರಕ್ಷಾ, ಇಂದಿರಾ ಪಿಂಚಣಿ ಹಾಗೂ ಭಾಗ್ಯ ಜ್ಯೋತಿ ಯೋಜನೆಗಳಿಗೆ ಅರ್ಹರನ್ನು ಗುರುತಿಸಿ ನೆರವು ಒದಗಿಸಿದ್ದಾರೆ.
ಈ ಅಭಿಯಾನದ ಫಲವಾಗಿ 14 ಮಂದಿಗೆ ವೃದ್ಧಾಪ್ಯ ವೇತನ, 16 ಮಹಿಳೆಯರಿಗೆ ವಿಧವಾ ವೇತನ ಹಾಗೂ 8 ಮಂದಿಗೆ ವಿಕಲಚೇತನ ಪಿಂಚಣಿ ಮಂಜೂರಾಗಿದೆ. ಜೊತೆಗೆ 10 ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ಮಾಡಿಕೊಡಲಾಗಿದೆ.
ಕೇವಲ ಸರ್ಕಾರಿ ಯೋಜನೆಗಳಷ್ಟೇ ಅಲ್ಲದೆ, 3 ವೃದ್ಧೆಯರಿಗೆ ಉಚಿತ ಕಣ್ಣಿನ ಚಿಕಿತ್ಸೆ ಕಲ್ಪಿಸಲಾಗಿದ್ದು, 4 ಮಂದಿಗೆ ಅಂಚೆ ಬ್ಯಾಂಕ್ ಖಾತೆ ತೆರೆಯುವ ವ್ಯವಸ್ಥೆ ಕೂಡ ಮಾಡಲಾಗಿದೆ.
ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡಿ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ‘ಆಸರೆ’ ಕಾರ್ಯಕ್ರಮ ಯಶಸ್ವಿಯಾಗಿದೆ.



