ಚಾಮರಾಜನಗರ: ಕಾಡುಪ್ರಾಣಿಗಳ ದಾಳಿಯ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಸಂಬಂಧಿಸಿದ ಪಾದಯಾತ್ರೆ ವ್ಯವಸ್ಥೆಯಲ್ಲಿ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದೀಗ ಜಾತ್ರಾ ಕಾಲವನ್ನು ಹೊರತುಪಡಿಸಿ ಉಳಿದ ಸಾಮಾನ್ಯ ದಿನಗಳಲ್ಲಿ ಭಕ್ತರ ಪಾದಯಾತ್ರೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಭಕ್ತರು ಬಸ್ ಸೇರಿದಂತೆ ವಾಹನಗಳಲ್ಲಿಯೇ ಬೆಟ್ಟಕ್ಕೆ ತೆರಳಬೇಕೆಂದು ಸೂಚಿಸಲಾಗಿದೆ. ಮಾನವ–ಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಪ್ರತಿದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪಾದಯಾತ್ರೆಯು ಹಳೆಯ ಪರಂಪರೆ ಆಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು ವರ್ಷಪೂರ್ತಿ ಮುಂದುವರಿದಿದ್ದರಿಂದ ಕಾಡುಮಾರ್ಗಗಳಲ್ಲಿ ಅಪಾಯ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳಲ್ಲಿ ಚಿರತೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡ ಘಟನೆಗಳು ನಡೆದಿವೆ. ಆನೆಗಳ ಸಂಚಾರವೂ ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯಂತೆ ಹೊಸ ನಿರ್ಬಂಧ ಜಾರಿಗೆ ತರಲಾಗಿದೆ.
ಇನ್ನು ಮುಂದೆ ಮಲೆಮಹದೇಶ್ವರ ಬೆಟ್ಟ–ನಾಗಮಲೈ ನಡುವಿನ 14 ಕಿ.ಮೀ. ಕಾಡುಮಾರ್ಗದಲ್ಲಿ ಕೇವಲ 3 ಕಿ.ಮೀ.ವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲಾಗಿದ್ದು, ಅದು ಕೂಡ ಗೈಡ್‌ಗಳೊಂದಿಗೆ ಹಾಗೂ ಕಡ್ಡಾಯ ಮುಂಜಾಗ್ರತಾ ಕ್ರಮಗಳೊಂದಿಗೆ ಮಾತ್ರ ಅನುಮತಿಸಲಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.



