ಕನ್ನಡದ ಜನಪ್ರಿಯ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ನಿಧನದ ಬಳಿಕ ಹಲವು ಆಘಾತಕಾರಿ ಮಾಹಿತಿಗಳು ಹೊರಬರುತ್ತಿವೆ. ಇದೀಗ ನಟಿ ಅಭಿನಯ ಅವರು ನೀಡಿರುವ ಹೇಳಿಕೆ ಅಭಿಮಾನಿಗಳ ಮನ ಕಲುಕಿದೆ. ಹೃದಯಾಘಾತಕ್ಕೂ ಮುನ್ನ ದಿಲೀಪ್ ರಾಜ್ ಆರೋಗ್ಯ ತಪಾಸಣೆಗೆ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ದಿಲೀಪ್ ರಾಜ್ ಜೊತೆ ಅಭಿನಯಿಸಿದ್ದ ನಟಿ ಅಭಿನಯ, ಅವರ ಅಂತಿಮ ದರ್ಶನ ಪಡೆದು ಮಾತನಾಡುವ ವೇಳೆ ಭಾವುಕರಾದರು. ‘ಹಿಟ್ಲರ್ ಕಲ್ಯಾಣದಲ್ಲಿ ನನಗೆ ಉತ್ತಮ ಪಾತ್ರ ನೀಡಿದ್ದರು. ನಂತರ ಬ್ರಹ್ಮಗಂಟು ಸೀರಿಯಲ್‌ನಲ್ಲೂ ಅವಕಾಶ ಕೊಟ್ಟಿದ್ದರು. ನಾವು ಚೆನ್ನಾಗಿ ಕೆಲಸ ಮಾಡ್ತೀವಿ ಅನ್ನೋ ನಂಬಿಕೆ ಅವನಿಗಿತ್ತು. ತುಂಬಾ ಪ್ರೋತ್ಸಾಹ ಕೊಡುತ್ತಿದ್ದ’ ಎಂದು ಹೇಳಿದರು.
ಆ ಬಳಿಕ ಅವರು ದಿಲೀಪ್ ರಾಜ್ ಆರೋಗ್ಯದ ಬಗ್ಗೆ ಮಹತ್ವದ ವಿಚಾರ ಹಂಚಿಕೊಂಡರು. ‘ವರ್ಕ್ ಪ್ರೆಷರ್‌ನಿಂದೋ ಏನೋ ಗೊತ್ತಿಲ್ಲ, ಅವರಿಗೆ ನೋವು ಇತ್ತು ಅಂತ ಹೇಳುತ್ತಿದ್ದರು. ಅದಕ್ಕಾಗಿ ಫುಲ್ ಬಾಡಿ ಚೆಕಪ್ ಮಾಡಿಸಿಕೊಳ್ಳಲು ವೈದ್ಯರ ಅಪಾಯಿಂಟ್ಮೆಂಟ್ ಕೂಡ ತೆಗೆದುಕೊಂಡಿದ್ದರು. ಬೆಳಿಗ್ಗೆ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಹೃದಯಾಘಾತದಿಂದ ಅವರು ನಮ್ಮನ್ನೆಲ್ಲ ಬಿಟ್ಟು ಹೋದರು’ ಎಂದು ಅಭಿನಯ ಕಣ್ಣೀರಿಟ್ಟರು.
ದಿಲೀಪ್ ರಾಜ್ ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಅವರಿಗೆ ಹೊಸ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕಿರುತೆರೆ ಮತ್ತು ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.



