ರಾಯ್ಪುರ: ವಿರಾಟ್ ಕೊಹ್ಲಿಯವರ ಅಜೇಯ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ 16 ಅಂಕಗಳನ್ನು ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದ ವೇಳೆ ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ತಮ್ಮ ಚಿನ್ನದ ಸರವನ್ನು ಮೈದಾನದಲ್ಲೇ ಕಳೆದುಕೊಂಡಿದ್ದಾರೆ.
ಕಾರ್ತಿಕ್ ತ್ಯಾಗಿ ಎಸೆದ ಬೌನ್ಸರ್‌ಗೆ ಬಲವಾಗಿ ಹೊಡೆಯಲು ಯತ್ನಿಸಿದ ಬೆಥೆಲ್, ಚೆಂಡು ಹೆಲ್ಮೆಟ್‌ಗೆ ಬಡಿದ ಪರಿಣಾಮ ವಿಕೆಟ್ ಕಳೆದುಕೊಂಡರು. ಈ ಸಂದರ್ಭ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ನೆಲಕ್ಕೆ ಬಿದ್ದಿತ್ತು. 15 ರನ್‌ಗಳಿಗೆ ಔಟಾದ ಬೆಥೆಲ್ ಸರ ಬಿದ್ದಿರುವುದನ್ನು ಗಮನಿಸದೆ ಪೆವಿಲಿಯನ್ ಕಡೆ ನಡೆದುಕೊಂಡು ಹೋಗಿದ್ದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ದೇವದತ್ ಪಡಿಕಲ್ ಪಿಚ್‌ನಲ್ಲಿ ಬಿದ್ದಿದ್ದ ಚಿನ್ನದ ಸರವನ್ನು ಗಮನಿಸಿದರು. ತಕ್ಷಣ ಅದನ್ನು ಎತ್ತಿ ಅಂಪೈರ್‌ಗಳಿಗೆ ಒಪ್ಪಿಸಿ ಕ್ರೀಡಾಸ್ಫೂರ್ತಿ ಮೆರೆದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲೇ ಬೆಥೆಲ್ ವಿಕೆಟ್ ಕಳೆದು ಹಿನ್ನಡೆಯಾದರೂ, ಬಳಿಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಜೋಡಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದಿತು.
ಇಬ್ಬರೂ ಎರಡನೇ ವಿಕೆಟ್‌ಗೆ 59 ಎಸೆತಗಳಲ್ಲಿ 92 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ನಂತರ ದೇವದತ್ ಪಡಿಕಲ್ ಕಾರ್ತಿಕ್ ತ್ಯಾಗಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.



