ಮೈಸೂರು: ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತಿಲ್ಲ ಹಾಗೂ ಹೊಸ ರೀತಿಯ ಕೇಸರಿ ಪೇಟಕ್ಕೂ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, “ಪರಂಪರೆಯಿಂದ ಇದ್ದ ಪೇಟಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗ ಹೊಸ ಬಣ್ಣದ ಪೇಟ ಹಾಕಿಕೊಂಡು ಬಂದರೆ ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಹಿಜಾಬ್ ವಿಚಾರ ಮಾತ್ರವಲ್ಲ, ಜನಿವಾರ, ಶಿವಧಾರ, ಪೇಟ ಇವುಗಳಿಗೂ ಅವಕಾಶ ನೀಡಿದ್ದೇವೆ. ಆದರೆ ಹೊಸ ರೂಪದಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಗುರುತು ತರುವುದಕ್ಕೆ ಅವಕಾಶ ಇಲ್ಲ” ಎಂದು ಹೇಳಿದರು.
ಹೈಕಮಾಂಡ್ ಭೇಟಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನನ್ನನ್ನು ಇನ್ನೂ ಕರೆದಿಲ್ಲ. ಹೈಕಮಾಂಡ್ ಕರೆದಾಗ ದೆಹಲಿಗೆ ಹೋಗುತ್ತೇನೆ” ಎಂದರು. ಸಂಪುಟ ಪುನಾರಚನೆ ಬಗ್ಗೆ ಕೇಳಿದಾಗ, “ಚರ್ಚೆ ನಡೆದರೆ ಕ್ರಮ ಕೈಗೊಳ್ಳುತ್ತೇನೆ” ಎಂದು ಉತ್ತರಿಸಿದರು.
ಮೈಸೂರು ಪ್ರವಾಸದ ವೇಳೆ ಸಿಎಂ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ರಸ್ತೆ, ವಿದ್ಯುತ್ ಹಾಗೂ ಬಸ್ ನಿಲ್ದಾಣ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.



