ಭೋಪಾಲ್: ಮಧ್ಯಪ್ರದೇಶದಲ್ಲಿ ತಿರುವನಂತಪುರಂ–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಈ ಘಟನೆ ಲೂನಿ ರಿಚ್ಛಾ ಮತ್ತು ವಿಕ್ರಮ್ಗಢ್ ಅಲೋಟ್ ನಿಲ್ದಾಣಗಳ ನಡುವಿನ ಭಾಗದಲ್ಲಿ ಸಂಭವಿಸಿದೆ.
ಇಂದು ಬೆಳಿಗ್ಗೆ ಸುಮಾರು 5.15ಕ್ಕೆ ತಿರುವನಂತಪುರಂನಿಂದ ನಿಜಾಮುದ್ದೀನ್ ಕಡೆಗೆ ಹೊರಟಿದ್ದ 12431 ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಹಿಂಭಾಗದ SLR ಹಾಗೂ B1 ಕೋಚ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ರೈಲ್ವೆ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಕೋಚ್ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಅಥವಾ ರೈಲ್ವೆ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಿತಿಯನ್ನು ತಕ್ಷಣ ನಿಯಂತ್ರಣಕ್ಕೆ ತರುವ ಸಲುವಾಗಿ ಬೆಂಕಿ ತಗುಲಿದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆ ಸಂಬಂಧ ರೈಲ್ವೆ ಇಲಾಖೆ ತನಿಖೆ ಆರಂಭಿಸಿದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.



