ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19ರ ಪ್ಲೇಆಫ್ ಪೈಪೋಟಿ ತೀವ್ರ ಹಂತ ತಲುಪಿದ್ದು, ಇಂದು ನಡೆಯಲಿರುವ 61ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಈ ಮಹತ್ವದ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ಆರ್‌ಸಿಬಿಗೆ ನೇರ ಎಚ್ಚರಿಕೆ ನೀಡಿದ್ದು, ತಮ್ಮ ತಂಡ ಗೆಲುವಿಗೆ ಸಂಪೂರ್ಣ ಸಜ್ಜಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಮತ್ತೊಂದೆಡೆ, ಪ್ಲೇಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಪಂಜಾಬ್ ಕಿಂಗ್ಸ್ ಗೆಲುವು ಅನಿವಾರ್ಯವಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಸತತ ಐದು ಸೋಲುಗಳ ಆಘಾತದಲ್ಲಿದ್ದರೂ, ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ನಾವು ಆರ್‌ಸಿಬಿ ವಿರುದ್ಧ ಆಡಲು ಇನ್ನೂ ಕಾಯಲು ಸಾಧ್ಯವಿಲ್ಲ. ಎಲ್ಲದರಿಗೂ ಸಿದ್ಧವಾಗಿಯೇ ಕಣಕ್ಕಿಳಿಯುತ್ತೇವೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕು, ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಪ್ಲೇಆಫ್ ಪ್ರವೇಶಿಸುವ ತಮ್ಮ ತಂಡದ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಪಂದ್ಯದಲ್ಲಿ ಅಝ್ಮತುಲ್ಲಾ ಒಮರ್ಜಾಯ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 200ಕ್ಕೂ ಅಧಿಕ ರನ್ ಕಲೆಹಾಕಿದ್ದರೂ, ಬೌಲಿಂಗ್ ವೈಫಲ್ಯದಿಂದ ಮುಂಬೈ ಇಂಡಿಯನ್ಸ್ ಎದುರು ಸೋಲು ಅನುಭವಿಸಿತ್ತು.
ಈ ಸೋಲನ್ನು ಒಪ್ಪಿಕೊಂಡ ಶ್ರೇಯಸ್ ಅಯ್ಯರ್, “ಆ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ತಂಡದ ಮೇಲೆ ಒತ್ತಡ ಇರುವುದು ನಿಜ. ಆದರೆ ಇಂತಹ ಒತ್ತಡದ ಕ್ಷಣಗಳಲ್ಲೇ ಶ್ರೇಷ್ಠ ಪ್ರದರ್ಶನ ಹೊರಬರುತ್ತದೆ” ಎಂದು ಹೇಳಿದ್ದಾರೆ.



