ಬೆಂಗಳೂರು: ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿರುವ ಬೆನ್ನಲ್ಲೇ, ಅವರ ಸಾವಿನ ಕುರಿತು ಹೃದ್ರೋಗ ತಜ್ಞ ಹಾಗೂ ಸಂಸದ ಡಾ. ಮಂಜುನಾಥ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ದಿಲೀಪ್ ರಾಜ್ ಅವರಿಗೆ ಹೃದಯಾಘಾತಕ್ಕೂ ಮುನ್ನ ಎದೆ ಉರಿ ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿತ್ತಂತೆ. ಆದರೆ ಅದನ್ನು ಗ್ಯಾಸ್ಟ್ರಿಕ್ ಎಂದುಕೊಂಡು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.
“ಈಗ ಹಲವಾರು ಹೃದಯಾಘಾತಗಳು ಗ್ಯಾಸ್ಟ್ರಿಕ್ ರೀತಿಯಲ್ಲಿ ಕಾಣಿಸುತ್ತವೆ. ಜನರು ಅದನ್ನು ಸಾಮಾನ್ಯ ಅಜೀರ್ಣ ಸಮಸ್ಯೆ ಎಂದುಕೊಂಡು ಕಡೆಗಣಿಸುತ್ತಾರೆ. ಅದು ದೊಡ್ಡ ತಪ್ಪು” ಎಂದು ಅವರು ಹೇಳಿದ್ದಾರೆ.
ಇನ್ನೂ ಕೆಲವರಿಗೆ ಗಂಟಲು ನೋವು, ದವಡೆ ನೋವು ಅಥವಾ ಬೆನ್ನಿನ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಇವುಗಳೂ ಹೃದಯಾಘಾತದ ಸೂಚನೆಗಳಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ರಕ್ತದೊತ್ತಡ, ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬೇಕು ಎಂದು ಸಲಹೆ ನೀಡಿದ್ದಾರೆ.
“ವ್ಯಾಯಾಮ ಒಳ್ಳೆಯದು, ಆದರೆ ಅತಿಯಾದ ವ್ಯಾಯಾಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆರೋಗ್ಯಕರ ಆಹಾರ ಸೇವನೆ, ಉತ್ತಮ ನಿದ್ರೆ ಮತ್ತು ಒತ್ತಡರಹಿತ ಜೀವನ ಬಹಳ ಮುಖ್ಯ. ಇತ್ತೀಚೆಗೆ ಬೇಗ ಯಶಸ್ಸು ಪಡೆಯಬೇಕು ಎನ್ನುವ ಮಾನಸಿಕ ಒತ್ತಡ ಜನರಲ್ಲಿ ಹೆಚ್ಚಾಗಿದೆ. ಅದರಿಂದ ದೇಹದ ಮೇಲೆ ಪರಿಣಾಮ ಬೀಳುತ್ತಿದೆ” ಎಂದು ಡಾ. ಮಂಜುನಾಥ್ ಹೇಳಿದ್ದಾರೆ.
ದಿಲೀಪ್ ರಾಜ್ ಅವರ ಸಾವಿನ ಬಳಿಕ ಸಿನಿಮಾ ಮತ್ತು ಟಿವಿ ಕ್ಷೇತ್ರದ ಒತ್ತಡ, ಆರೋಗ್ಯ ನಿರ್ಲಕ್ಷ್ಯ ಹಾಗೂ ಜೀವನಶೈಲಿಯ ಬಗ್ಗೆ ಮತ್ತೆ ಗಂಭೀರ ಚರ್ಚೆಗಳು ಆರಂಭವಾಗಿವೆ.



