ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ಜೈಲು ದಾಖಲೆಗಳು ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿವೆ. ಕುಟುಂಬದ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ದರ್ಶನ್ ಆರೋಪಿಸಿದ್ದರೂ, ಜೈಲು ಅಧಿಕಾರಿಗಳು ಸಲ್ಲಿಸಿದ ಮಾಹಿತಿಯಲ್ಲಿ ಬೇರೆ ಚಿತ್ರಣ ಹೊರಬಿದ್ದಿದೆ.
ಜೈಲು ದಾಖಲೆಗಳ ಪ್ರಕಾರ, ದರ್ಶನ್ 70ಕ್ಕೂ ಹೆಚ್ಚು ಬಾರಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. 28 ಬಾರಿ ವಕೀಲರನ್ನು ಭೇಟಿಯಾಗಿದ್ದು, ಜೈಲಿನಿಂದ 73 ಬಾರಿ ಫೋನ್ ಕರೆಗಳನ್ನು ಕೂಡ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಇದಷ್ಟೇ ಅಲ್ಲದೆ, ದರ್ಶನ್ ಅವರಿಗೆ ವಿಶೇಷ ಸೌಲಭ್ಯಗಳನ್ನೂ ನೀಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರದ ಜೊತೆಗೆ ಹೆಚ್ಚುವರಿಯಾಗಿ ಹಾಲು, ಮೊಟ್ಟೆ ಒದಗಿಸಲಾಗುತ್ತಿದೆ. ಹೆಚ್ಚುವರಿ ಬೆಡ್‌ಶೀಟ್, ಬಾಚಣಿಗೆ ಸೇರಿದಂತೆ ನ್ಯಾಯಾಲಯ ಸೂಚಿಸಿದ ಸೌಲಭ್ಯಗಳನ್ನೂ ನೀಡಲಾಗಿದೆ. ಭೇಟಿ ನೀಡುವವರು ತರುವ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಸ್ವೀಕರಿಸಲು ಅವಕಾಶ ಇದೆ ಎಂದು ತಿಳಿಸಲಾಗಿದೆ.
ಭದ್ರತೆ ವಿಚಾರದಲ್ಲೂ ವಿಶೇಷ ಕಾಳಜಿ ವಹಿಸಲಾಗಿದೆ. ಹಗಲು ವೇಳೆ ಸಹಾಯಕ ಜೈಲರ್ ಹಾಗೂ ವಾರ್ಡನ್, ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್‌ಗಳನ್ನು ನಿಯೋಜಿಸಲಾಗಿದೆ. ಬ್ಯಾರಕ್ ಸುತ್ತಮುತ್ತ ಸಿಸಿಟಿವಿ ಅಳವಡಿಸಿ, ಇತರ ಕೈದಿಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್, ಜೈಲಿನ ಪರಿಸ್ಥಿತಿಯನ್ನು ಉಲ್ಲೇಖಿಸಿ ಜಾಮೀನು ಕೋರಿದ್ದರು. ಆದರೆ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಮತ್ತು ದಾಖಲೆಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.



