ವಿಜಯಸಾಕ್ಷಿ ಸುದ್ದಿ, ಗದಗ: “ಪರಿಸರ ಸಂರಕ್ಷಣೆ ಹಾಗೂ ನಗರಗಳ ಸ್ವಚ್ಛತೆಗಾಗಿ ಹೊಸ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು–2026ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಬಾರದು” ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು–2026ರ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳ ಅನ್ವಯ ಸಾರ್ವಜನಿಕರು, ಮನೆಮಠಗಳು ಹಾಗೂ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಕಡ್ಡಾಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಗರಸಭೆಯ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬೃಹತ್ ಕಸ ಉತ್ಪಾದಕರನ್ನು (Bulk Waste Generators) ಗುರುತಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ದಿನಕ್ಕೆ 100 ಕೆಜಿಗೂ ಅಧಿಕ ಕಸ ಉತ್ಪಾದಿಸುವ ಅಥವಾ 40 ಸಾವಿರ ಲೀಟರ್‌ಗಿಂತ ಹೆಚ್ಚು ನೀರು ಬಳಸುವ ಹಾಗೂ 20 ಸಾವಿರ ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಸಂಸ್ಥೆಗಳು ಈ ನಿಯಮದ ವ್ಯಾಪ್ತಿಗೆ ಬರುತ್ತವೆ ಎಂದರು.
ಹೊಸ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು ಹಾಗೂ ತ್ಯಾಜ್ಯ ವಿಲೇವಾರಿ ಕುರಿತಂತೆ ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ ಮಾತನಾಡಿ, ಘನ ತ್ಯಾಜ್ಯ ನಿರ್ವಹಣಾ ನಿಯಮಗಳು–2026 ಎಪ್ರಿಲ್ 1ರಿಂದ ಜಾರಿಗೆ ಬಂದಿವೆ ಎಂದು ಹೇಳಿದರು.
“ಸೆಪ್ಟೆಂಬರ್ 30, 2026ರೊಳಗೆ ಎಲ್ಲಾ ರಾಜ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮದೇ ಆದ ರಾಜ್ಯ ನೀತಿಯನ್ನು ಅಂತಿಮಗೊಳಿಸಬೇಕು” ಎಂದು ಬಸನಗೌಡ ಕೋಟೂರ ತಿಳಿಸಿದರು.
ಅಕ್ಟೋಬರ್ 30, 2026ರೊಳಗೆ ನಗರ ಪ್ರದೇಶಗಳಲ್ಲಿನ ಹಳೆಯ ಕಸದ ರಾಶಿಗಳ ಭೌಗೋಳಿಕ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಕ್ಟೋಬರ್ 31, 2027ರೊಳಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಕಸ ನಿರ್ವಹಣೆಗೆ ಸಂಬಂಧಿಸಿದ ಉಪ-ಕಾಯ್ದೆಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಚಳಗೇರಿ, ಪರಿಸರ ಅಧಿಕಾರಿ ಲೋಹಿತ್ ಕುಮಾರ್ ಪಿ.ಜೆ., ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಗದಗ-ಬೆಟಗೇರಿ ನಗರಸಭೆಯ ಕಾರ್ಯಕಾರಿ ಅಭಿಯಂತರ (ಪರಿಸರ) ಆನಂದ ಬದಿ, ಎಸ್‌ಡಬ್ಲ್ಯುಎಂ ತಜ್ಞ ಕೊಟ್ರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂದು ಕಸವನ್ನು ಪ್ರತ್ಯೇಕಿಸುವುದು ಕಡ್ಡಾಯ. ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು”
ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ
ಯಾವ ಕಸ ಯಾವ ವಿಭಾಗಕ್ಕೆ..?
ಹಸಿ ತ್ಯಾಜ್ಯ:
ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಹಣ್ಣು, ಹೂವು, ಮಾಂಸದ ತ್ಯಾಜ್ಯ ಹಾಗೂ ಕೊಳೆಯುವ ವಸ್ತುಗಳು
ಒಣ ತ್ಯಾಜ್ಯ:
ಪ್ಲಾಸ್ಟಿಕ್, ಬಟ್ಟೆ, ಕಬ್ಬಿಣ, ರಬ್ಬರ್, ಮರದ ವಸ್ತುಗಳು
ಸ್ಯಾನಿಟರಿ ತ್ಯಾಜ್ಯ:
ಡೈಪರ್, ಸ್ಯಾನಿಟರಿ ನ್ಯಾಪ್ಕಿನ್‌ಗಳು
ವಿಶೇಷ ಕಾಳಜಿ ತ್ಯಾಜ್ಯ:
ಪೇಂಟ್ ಡಬ್ಬಿಗಳು, ಔಷಧ ಬಾಟಲಿಗಳು, ಇ-ವೇಸ್ಟ್, ಬಲ್ಬ್, ಹಳೆಯ ಬ್ಯಾಟರಿ, ಬಳಸಿದ ಸಿರಿಂಜ್, ಬ್ಯಾಂಡೇಜ್‌ಗಳು



