ರಾಯಚೂರು: ವಕ್ಫ್ ಬೋರ್ಡ್ ಅನುದಾನ ದುರ್ಬಳಕೆ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿ ಹಾಗೂ ಆತನ ಬೆಂಬಲಿಗರ ಮೇಲೆ ಸುಮಾರು 30 ಮಂದಿಯ ಗುಂಪು ಸಿನಿಮೀಯ ಶೈಲಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ತಾಲೂಕಿನ ತಲಮಾರಿ ಗ್ರಾಮದ ಮಸೀದಿ, ಖಬರಸ್ತಾನ ಹಾಗೂ ಈದ್ಗಾ ಮೈದಾನದ ಅಭಿವೃದ್ಧಿಗಾಗಿ 2017-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಬ್ ಹಾಗೂ ವಕ್ಫ್ ಮಂಡಳಿಯಿಂದ ಒಟ್ಟು 26 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಈ ಕಾಮಗಾರಿಯಲ್ಲಿ ಭಾರೀ ಪ್ರಮಾಣದ ಅನುದಾನ ದುರ್ಬಳಕೆ ನಡೆದಿದೆ ಎಂದು ಆರೋಪಿಸಿ ಗ್ರಾಮದ ಸನಾವುಲ್ಲಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ಸಂಬಂಧ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ತನಿಖೆ ನಡೆದ ಬೆನ್ನಲ್ಲೇ ದೂರುದಾರನ ಮೇಲೆ ದ್ವೇಷ ಹೊಂದಿದ್ದ ಎದುರಾಳಿಗಳು, ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ನೆಪದಲ್ಲಿ ಸನಾವುಲ್ಲಾನನ್ನು ರಾಯಚೂರಿನ ತಹಶೀಲ್ದಾರ್ ಕಚೇರಿ ಸಮೀಪಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಮಾತುಕತೆ ನಡೆಯುತ್ತಿದ್ದ ವೇಳೆ ಏಕಾಏಕಿ ಸುಮಾರು 30 ಮಂದಿಯ ಗುಂಪು ಚಾಕು, ಭರ್ಜಿ ಹಾಗೂ ಕಲ್ಲುಗಳಿಂದ ಸನಾವುಲ್ಲಾ ಮತ್ತು ಆತನ ಸ್ನೇಹಿತರ ಮೇಲೆ ದಾಳಿ ನಡೆಸಿದೆ. ನಡುರಸ್ತೆಯಲ್ಲೇ ನಡೆದ ಈ ಭೀಕರ ಹಲ್ಲೆಯಲ್ಲಿ ಸನಾವುಲ್ಲಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ದೇಹದ ವಿವಿಧ ಭಾಗಗಳಿಗೆ 24 ಹೊಲಿಗೆ ಹಾಕಲಾಗಿದೆ.
ಗಾಯಾಳು ಸನಾವುಲ್ಲಾಗೆ ರಾಯಚೂರಿನ ಓಪೆಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ಅಶುಪಟೇಲ್, ನಿಜಾಮ್ ಪಟೇಲ್, ಇರ್ಫಾನ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿಯ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಆರೋಪಿಗಳ ಕಡೆಯವರೂ ಸಹ ಸನಾವುಲ್ಲಾ ಮತ್ತು ಆತನ ಬೆಂಬಲಿಗರ ವಿರುದ್ಧ ಕೌಂಟರ್ ದೂರು ದಾಖಲಿಸಿದ್ದು, ಪೊಲೀಸರು ಎರಡೂ ಪ್ರಕರಣಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.



