ನವದೆಹಲಿ: ತಂದೆ ಮತ್ತು ತಾಯಿ ಇಬ್ಬರೂ ಐಎಎಸ್ ಅಧಿಕಾರಿಗಳಾಗಿದ್ದರೆ, ಅವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ.
ಹಿಂದುಳಿದ ವರ್ಗಗಳಲ್ಲಿನ ‘ಕೆನೆಪದರ’ ನಿಯಮಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.
ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದಿಂದ ಒಂದು ಕುಟುಂಬ ಈಗಾಗಲೇ ಸಾಮಾಜಿಕವಾಗಿ ಮುನ್ನಡೆ ಸಾಧಿಸಿರುತ್ತದೆ. ಇಂತಹ ಕುಟುಂಬಗಳ ಮುಂದಿನ ಪೀಳಿಗೆಯೂ ನಿರಂತರವಾಗಿ ಮೀಸಲಾತಿ ಪಡೆಯುತ್ತಲೇ ಇದ್ದರೆ, ಈ ವ್ಯವಸ್ಥೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ಮೀಸಲಾತಿಯ ಲಾಭ ಪಡೆದು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತ ಮಟ್ಟ ತಲುಪಿರುವ ಕುಟುಂಬಗಳು ಸ್ವಯಂಪ್ರೇರಿತವಾಗಿ ಮೀಸಲಾತಿಯಿಂದ ಹೊರಗುಳಿಯಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಮಾಜದ ತಳಮಟ್ಟದಲ್ಲಿರುವ ಬಡ ಮತ್ತು ಸೌಲಭ್ಯಗಳಿಂದ ವಂಚಿತ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಅವಕಾಶಗಳನ್ನು ಸಬಲ ವರ್ಗದವರು ಕಸಿದುಕೊಳ್ಳಬಾರದು ಎಂದು ಪೀಠ ಹೇಳಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ, “ಒಂದು ಕುಟುಂಬ ಮೀಸಲಾತಿಯ ಲಾಭ ಪಡೆದು ಉನ್ನತ ಶಿಕ್ಷಣ, ಆರ್ಥಿಕ ಸ್ಥಿರತೆ ಮತ್ತು ಪ್ರಭಾವಿ ಹುದ್ದೆಗಳನ್ನು ಪಡೆದ ಬಳಿಕವೂ ಅವರ ಮಕ್ಕಳು ಅದೇ ಸೌಲಭ್ಯ ಪಡೆಯುತ್ತಲೇ ಇದ್ದರೆ, ಸಮಾನತೆ ಸಾಧಿಸುವ ಉದ್ದೇಶವೇ ಹಾಳಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದೂಡಿದೆ.
ಏನಿದು ಪ್ರಕರಣ?
ಕರ್ನಾಟಕದ ಕುರುಬ ಸಮುದಾಯಕ್ಕೆ ಸೇರಿದ ರಾಘವೇಂದ್ರ ಫಕೀರಪ್ಪ ಚಂದ್ರನಾವರ್ ಅವರು ಕೆಪಿಟಿಸಿಎಲ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿದ್ದರು. ಆದರೆ, ಅವರ ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮಿತಿಯನ್ನು ಮೀರಿತ್ತು.
ಈ ಹಿನ್ನೆಲೆ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಅವರನ್ನು ‘ಕೆನೆಪದರ’ ವ್ಯಾಪ್ತಿಗೆ ಸೇರಿಸಿ ಜಾತಿ ಪ್ರಮಾಣಪತ್ರ ರದ್ದುಗೊಳಿಸಿತ್ತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸಹ ಮಾನ್ಯ ಮಾಡಿತ್ತು. ಬಳಿಕ ಅಭ್ಯರ್ಥಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.



