ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಶಂಕರಗೌಡ ಜಾಯನಗೌಡರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ರೈತ ಮುಖಂಡರು, ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಘದ ಮುಖಂಡರು ಮಾತನಾಡಿ, ಎಫ್‌ಐಡಿ ಮೂಲಕ ನಡೆಯುತ್ತಿರುವ ರಸಗೊಬ್ಬರ ವಿತರಣೆಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಪದ್ಧತಿಯನ್ನು ರದ್ದುಪಡಿಸಿ, ರೈತರಿಗೆ ಯಾವುದೇ ಮಧ್ಯವರ್ತಿತನವಿಲ್ಲದೆ ಸಂಪೂರ್ಣ ಪ್ರಮಾಣದ ರಸಗೊಬ್ಬರವನ್ನು ನೇರವಾಗಿ ಪೂರೈಸಬೇಕು ಎಂದು ಆಗ್ರಹಿಸಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ಖರೀದಿ ಕೇಂದ್ರಗಳನ್ನು ವರ್ಷಪೂರ್ತಿ ತೆರೆಯಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರ ಅನುಕೂಲಕ್ಕಾಗಿ ಸುಸಜ್ಜಿತ ಗೋದಾಮುಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ದೇಸಿ ಹಸು ಸಾಕಾಣಿಕೆ ಉತ್ತೇಜಿಸಲು ಸರ್ಕಾರ ವಿಶೇಷ ಪ್ರೋತ್ಸಾಹಧನ ಘೋಷಿಸಬೇಕು. ರೈತರ ಬೆಳೆಗಳನ್ನು ನಾಶಪಡಿಸುತ್ತಿರುವ ಮಂಗಗಳು ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಅವುಗಳನ್ನು ಸುರಕ್ಷಿತ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಫಸಲು ಭೀಮಾ ಯೋಜನೆಯಡಿ ಸ್ಯಾಟಲೈಟ್ ಹಾಗೂ ಬಯೋಮೆಟ್ರಿಕ್ ಸರ್ವೇ ಮೂಲಕ ವೈಜ್ಞಾನಿಕ ರೀತಿಯಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿ, ಅರ್ಹ ರೈತರಿಗೆ ತಕ್ಷಣ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಮಾರುಕಟ್ಟೆಯಲ್ಲಿ ಕಳಪೆ ಬೀಜಗಳ ಮಾರಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಪೂರೈಸಬೇಕು ಎಂದು ಹೇಳಿದರು.
“ನಮ್ಮ ಹೊಲ-ನಮ್ಮ ದಾರಿ” ಯೋಜನೆಯಡಿ ಪ್ರತಿ ರೈತನ ಜಮೀನಿಗೆ ಸಂಪರ್ಕ ರಸ್ತೆ ನಿರ್ಮಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ರಾತ್ರಿ ವೇಳೆ ನಡೆಯುವ ಹರಾಜು ಪ್ರಕ್ರಿಯೆಯಿಂದ ರೈತರ ಕಾಯಿಪಲ್ಲೆ ಮತ್ತು ಹಸಿ ಮಾಲುಗಳಿಗೆ ಹಂದಿ ಹಾಗೂ ಧನಕರುಗಳಿಂದ ಹಾನಿಯಾಗುತ್ತಿದೆ. ಆದ್ದರಿಂದ ಬೆಳಗಿನ ಜಾವ 6ರಿಂದ 9 ಗಂಟೆಯವರೆಗೆ ಹರಾಜು ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿದರು.
ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಮೇ 25ರಂದು ಗದಗ ಕೃಷಿ ಮಾರುಕಟ್ಟೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಹಾದೇವ ವೆರ್ಣೇಕರ, ಆದರ್ಶ ಹುಲಗೂರು, ಗೂಳಪ್ಪ ಗುಡದೂರ, ಗಿರೀಶ್ ಹೊಸಮನಿ, ಅಂದಪ್ಪ ಅಂಗಡಿ, ರಾಮಣ್ಣ ಕಮ್ಮಾರ, ಶಂಕರಗೌಡ ಪಾಟೀಲ, ಶಿವಮೂರ್ತಿ ದೊಡ್ಡವಾಡ, ರಾಮನಗೌಡ ಪಾಟೀಲ, ಪ್ರವೀಣ ಕರ್ಣೆ, ಪ್ರಕಾಶ ಹಡಗಲಿ, ರವಿ ವಗ್ಗಣ್ಣವರ, ಬಸವರಾಜ ಮರಾಠಿ, ಸಂತೋಷ ಮಠದ, ಮಲ್ಲಪ್ಪ ಮಠದ ಸೇರಿದಂತೆ ಸಂಘಟನೆಯ ಅನೇಕ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.
“ರೈತನಿಗೆ ನ್ಯಾಯ ಸಿಗದಿದ್ದರೆ ಕೃಷಿಯೇ ಸಂಕಷ್ಟಕ್ಕೆ ಸಿಲುಕುತ್ತದೆ. ಸರ್ಕಾರ ರೈತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು.”
ಶಂಕರಗೌಡ ಜಾಯನಗೌಡರ
ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ



