ಬೆಂಗಳೂರು: ನಗರದ ಕೆ.ಆರ್.ಪುರಂ ಪೊಲೀಸ್ ವಸತಿ ಗೃಹದಲ್ಲಿ ಕಾನ್ಸ್‌ಟೇಬಲ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೆಚ್‌ಎಎಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಜೇಶ್ ಆರಾಧ್ಯ ಅವರ ಪತ್ನಿ ಲಕ್ಷ್ಮೀಪ್ರಿಯಾ (27) ಮೃತ ಮಹಿಳೆ.
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ 2023ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಎಂಟು ತಿಂಗಳ ಮಗು ಇದ್ದು, ಕೆ.ಆರ್.ಪುರಂ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.
ಮೇ 22ರಂದು ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ಉಂಟಾಗಿದ್ದು, “ನನ್ನ ತಂದೆ-ತಾಯಿಗೆ ನೀನು ಗೌರವ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಯನ್ನು ಬೈದಿದ್ದಾನೆ ಎನ್ನಲಾಗಿದೆ. ಈ ವಿಚಾರದಿಂದ ಮನನೊಂದ ಲಕ್ಷ್ಮೀಪ್ರಿಯಾ, ಪತಿ ರಾತ್ರಿ ಕರ್ತವ್ಯಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಬಳಿಕ ಮೃತಳ ಪೋಷಕರು ಪತಿ ರಾಜೇಶ್ ಆರಾಧ್ಯ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾದ ಬಳಿಕದಿಂದಲೇ ವರದಕ್ಷಿಣೆ ವಿಚಾರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿದ್ದಾರೆ.
ಮೃತಳ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಜೇಶ್ ಆರಾಧ್ಯ ಹಾಗೂ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



