HomeKarnataka Newsಠಾಣೆಗೆ ವಿನಾಕಾರಣ ಕರೆದು ಕಿರುಕುಳ ಕೊಡಬೇಡಿ: ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ

ಠಾಣೆಗೆ ವಿನಾಕಾರಣ ಕರೆದು ಕಿರುಕುಳ ಕೊಡಬೇಡಿ: ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ

For Dai;y Updates Join Our whatsapp Group

Spread the love

ಬೆಂಗಳೂರು: ತನಿಖೆಯ ಹೆಸರಿನಲ್ಲಿ ಸಾರ್ವಜನಿಕರನ್ನು ವಿನಾಕಾರಣ ಪೊಲೀಸ್ ಠಾಣೆಗೆ ಕರೆಸಿ ಕಿರುಕುಳ ನೀಡಬಾರದು ಎಂದು ಹೈಕೋರ್ಟ್ ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ದಾಖಲಾಗಿರುವ ಅಪರಾಧದ ವ್ಯಾಪ್ತಿಯನ್ನು ಮೀರಿ ವಿಚಾರಣೆ ನಡೆಸಿದರೆ ಸಂಬಂಧಪಟ್ಟ ತನಿಖಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ, ತನಿಖೆಗೆ ಹಾಜರಾಗುವಂತೆ ನೀಡುವ ಸಮನ್ಸ್ ಅಥವಾ ನೋಟಿಸ್‌ನಲ್ಲಿ ಯಾವ ಕಾನೂನಿನ ಯಾವ ಕಲಂ ಅಡಿಯಲ್ಲಿ ಕರೆಯಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜೊತೆಗೆ, ನೋಟಿಸ್ ನೀಡಿದ ಅಧಿಕಾರಿಯ ಹೆಸರು, ಹುದ್ದೆ ಹಾಗೂ ಸಹಿ ಕಡ್ಡಾಯವಾಗಿರಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರಿನ ವರುಣ್ ಜುವೆಲ್ಲರ್ಸ್ ಸಂಸ್ಥಾಪಕರಾದ ನರೇಶ್ ಕುಮಾರ್ ಸಿಯಾಲ್ ಹಾಗೂ ಪ್ರಕಾಶ್ ಚಾಂದ್ ಸಿಯಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ಏಕಸದಸ್ಯ ಪೀಠ ಈ ಮಹತ್ವದ ಸೂಚನೆ ನೀಡಿದೆ.

ಅತ್ತಿಬೆಲೆ ಠಾಣೆ ಪೊಲೀಸರು ತನಿಖೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್‌ನಲ್ಲಿ ಯಾವುದೇ ಕಾನೂನು ಸೆಕ್ಷನ್ ಉಲ್ಲೇಖಿಸದೇ, ತನಿಖಾಧಿಕಾರಿಯ ಹೆಸರು ಮತ್ತು ಹುದ್ದೆ ನಮೂದಿಸದೇ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ಯಾವ ಅಧಿಕಾರದ ಅಡಿಯಲ್ಲಿ ನೋಟಿಸ್ ನೀಡಲಾಗಿದೆ? ಅಧಿಕಾರಿಯ ಹೆಸರು ಮತ್ತು ಹುದ್ದೆ ಯಾಕೆ ನಮೂದಿಸಿಲ್ಲ?” ಎಂದು ಪ್ರಶ್ನಿಸಿದೆ.

ಇದರ ಜೊತೆಗೆ, ಎರಡು ವಾರಗಳೊಳಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ನಾಲ್ಕನೇ ವಾರಕ್ಕೆ ಮುಂದೂಡಿದೆ.

ನ್ಯಾಯಪೀಠವು, “ನಿಯಮಾವಳಿಗಳ ಸ್ಪಷ್ಟ ಉಲ್ಲೇಖವಿಲ್ಲದೆ ಯಾರನ್ನೂ ಠಾಣೆಗೆ ಕರೆಯಬಾರದು. ಕರೆಯಿಸಿದರೂ ಕಿರುಕುಳ ನೀಡದೇ ನಿಗದಿತ ಅವಧಿಯೊಳಗೆ ವಿಚಾರಣೆ ಮುಗಿಸಬೇಕು” ಎಂದು ತಿಳಿಸಿದೆ.

ಇದೇ ವೇಳೆ, ಇ-ಆಫೀಸ್ ವ್ಯವಸ್ಥೆ ಬಳಸಿ ಡಿಜಿಟಲ್ ಸಹಿ ಹೊಂದಿರುವ ನೋಟಿಸ್ ನೀಡಬೇಕಿತ್ತು. ಅದನ್ನು ಯಾಕೆ ಪಾಲಿಸಲಾಗಿಲ್ಲ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದೆ.

ಪ್ರಕರಣದ ಹಿನ್ನೆಲೆ:

ಮಾರ್ಚ್ ತಿಂಗಳಲ್ಲಿ ಅತ್ತಿಬೆಲೆಯಲ್ಲಿ ನಡೆದ ದಾರುಣ ಘಟನೆಯಲ್ಲಿ, ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಮೋಹನ್ ಎಂಬಾತ ತಾಯಿ ಹಾಗೂ ಅಕ್ಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಪ್ರಕರಣಕ್ಕೂ ಮುನ್ನ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಸಾಲದ ಒತ್ತಡ ಮತ್ತು ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದ.

ಈ ಪ್ರಕರಣದ ತನಿಖೆ ಸಂಬಂಧ ವರುಣ್ ಜುವೆಲ್ಲರ್ಸ್ ಸಂಸ್ಥಾಪಕರಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಆದರೆ ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲದಿದ್ದರೂ ಠಾಣೆಗೆ ಕರೆಸಿ ವ್ಯಾಪಾರ, ಲಾಭ ಸೇರಿದಂತೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಇಡೀ ದಿನ ವಿಚಾರಣೆ ನಡೆಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!