ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಯಾವುದೇ ಅರ್ಹರು ಯೋಜನೆಗಳಿಂದ ವಂಚಿತರಾಗಬಾರದು ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆ ಲಾರಿಗಳ ಮೂಲಕ ಅಕ್ಕಿ ಸಾಗಾಟ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅದನ್ನು ತಡೆಗಟ್ಟುವ ಕೆಲಸ ಆಗಬೇಕು ಎಂದು ಸೂಚಿಸಿದರು.
ಯುವನಿಧಿ ಯೋಜನೆ ಕುರಿತು ನಗರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಮಳೆಗಾಲ ಹಿನ್ನೆಲೆಯಲ್ಲಿ ಹೆಸ್ಕಾಂ ಇಲಾಖೆ ವಿದ್ಯುತ್ ಅವಘಡಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಬಸ್ ಡಿಪೋಗೆ ಹೆಚ್ಚಿನ ಆದಾಯ ಇದ್ದರೂ ಹೊಸ ಬಸ್‌ಗಳು ಪದೇಪದೆ ಕೆಟ್ಟು ನಿಲ್ಲುತ್ತಿರುವುದನ್ನು ಸರಿಪಡಿಸಬೇಕು. ಬಸ್ ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆಗೆ ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ವೃದ್ಧರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಮಾತನಾಡಿ, ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಅಕ್ಕಿ ಸರಿಯಾಗಿ ವಿತರಣೆ ಆಗುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಸದಸ್ಯೆ ಶಶಿಕಲಾ ಬಡಿಗೇರ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಅಕ್ಕಿಯಲ್ಲಿ ಕಸ-ಕಡ್ಡಿ ಬರುತ್ತಿರುವ ಬಗ್ಗೆ ದೂರಿದ್ದು, ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಯೋಜನೆಗಳ ಪ್ರಗತಿ ಕುರಿತು ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಇಒ ಮಂಜುಳಾ ಹಕಾರಿ, ಎಡಿ ಕೃಷ್ಣಪ್ಪ ಧರ್ಮರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿಡಿಪಿಓ ಮೃತ್ಯುಂಜಯ ಗುಡ್ಡದಅನ್ಬೇರಿ, ಹೆಸ್ಕಾಂ ಇಲಾಖೆಯ ಆಂಜನಪ್ಪ, ಆಹಾರ ಇಲಾಖೆಯ ಜಗದೀಶ್ ಕುರುಬರ, ಸಾರಿಗೆ ಇಲಾಖೆಯ ಅಶೋಕ, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳು, ಪಂಚ ಗ್ಯಾರಂಟಿ ಸಮಿತಿ ಸದಸ್ಯರಾದ ರಮಜಾನಸಾಬ್ ನದಾಫ, ಕಲ್ಲಪ್ಪ ಗಂಗಣ್ಣವರ, ರಮೇಶ ಬಾರಕೇರ, ಖಾದರಸಾಬ್ ರಿತ್ತಿ, ಹಸನಸಾಬ್ ಜಂಗ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಪಂಚ ಗ್ಯಾರಂಟಿ ಯೋಜನೆಗಳ ಲಾಭ ಅರ್ಹರಿಗೆ ತಲುಪಿದಾಗಲೇ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ.”ನಾಗರಾಜ ಮಡಿವಾಳರ



