ಬೆಂಗಳೂರ: ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಧ್ಯರಾತ್ರಿ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹತ್ತಿರ ಸಂಬಂಧಿಕರೊಬ್ಬರ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್ಯಪಾಲರು ತುರ್ತಾಗಿ ಮುಂಬೈಗೆ ತೆರಳಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಬುಧವಾರ ತಡರಾತ್ರಿ ಸುಮಾರು 11:45ಕ್ಕೆ ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಪ್ರಯಾಣಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಇಂದು ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೋರಿದ್ದರು. ಅದಕ್ಕೆ ರಾಜಭವನವು ಬೆಳಗ್ಗೆ 11:30 ಹಾಗೂ ಮಧ್ಯಾಹ್ನ 3 ಗಂಟೆಯ ನಂತರ ಭೇಟಿಗೆ ಅವಕಾಶ ನೀಡಿತ್ತು.
ಆದರೆ ಸಿಎಂ ಭೇಟಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ರಾಜ್ಯಪಾಲರು ರಾಜಧಾನಿಯಿಂದ ದಿಢೀರ್ ನಿರ್ಗಮಿಸಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ರಾಜ್ಯಪಾಲರು ಇಂದು ಮುಂಬೈನಿಂದ ಮರಳುವ ಕುರಿತು ಇನ್ನೂ ಖಚಿತತೆ ಇಲ್ಲ. ಅವರು ಮರಳಿದ ಬಳಿಕ ಮಧ್ಯಾಹ್ನದ ನಂತರ ಸಿಎಂ ರಾಜೀನಾಮೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಮುಂದಿನ ಕೆಲ ಗಂಟೆಗಳು ಅತ್ಯಂತ ನಿರ್ಣಾಯಕವಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.



