ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಪಾಲಕರಿಗೆ ಮಕ್ಕಳೇ ಸಂಪತ್ತಾದರೆ, ಮಕ್ಕಳಿಗೆ ವಿದ್ಯೆಯೇ ನಿಜವಾದ ಸಂಪತ್ತು. ಸುಂದರ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣವೇ ಪ್ರಮುಖ ಸಾಧನ” ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಪಿಎಂಶ್ರೀ ಕೆಪಿಎಸ್ ಮಾದರಿ ಪ್ರಾಥಮಿಕ ಶಾಲೆ ನಂ. ೪ರಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಿ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
“ನಮ್ಮ ಹಿರಿಯರು ಶಾಲೆಯನ್ನು ‘ಸಾಲಿಗುಡಿ’ ಎಂದು ಕರೆಯುತ್ತಿದ್ದರು. ಹೀಗಾಗಿ ಶಾಲೆಗೆ ದೇವಾಲಯದಷ್ಟೇ ಪಾವಿತ್ರ್ಯವಿದೆ. ಮಕ್ಕಳನ್ನು ದೇವರಂತೆ ಕಾಣುವ ಶಿಕ್ಷಕರು ಪ್ರೀತಿ ಮತ್ತು ಗೌರವದಿಂದ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಶಿಕ್ಷಕರ ಮಾತೇ ವೇದವಾಕ್ಯವಾಗುತ್ತದೆ” ಎಂದು ಹೇಳಿದರು.
“ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕಾದರೆ ಪಾಲಕರು ಅವರನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಮಕ್ಕಳು ಆಡುತ್ತಾ, ಹಾಡುತ್ತಾ, ನಲಿಯುತ್ತಾ ಕಲಿಯಬೇಕು” ಎಂದು ಸಲಹೆ ನೀಡಿದರು.
“ಉತ್ತಮ ನಾಗರಿಕರಾಗಿ ಹೊರಹೊಮ್ಮುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಎಂಟನೇ ತರಗತಿಯ ನಂತರ ಸರ್ಕಾರಿ ಪ್ರೌಢಶಾಲೆಗಳಿಗೆ ಸೇರ್ಪಡೆಯಾಗಬೇಕು. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಸಬೇಕು” ಎಂದು ಮನವಿ ಮಾಡಿದರು.
“ಪಬ್ಲಿಕ್ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿ ನಮ್ಮದೇ ಆಗಿದ್ದು, ಪ್ರತಿದಿನ ಶಾಲೆಯ ಪ್ರಾರ್ಥನಾ ಸಭೆಗೆ ಬರುವ ಪ್ರಯತ್ನ ಮಾಡುತ್ತೇನೆ” ಎಂದು ಶಾಸಕ ಡಾ. ಲಮಾಣಿ ಹೇಳಿದರು.
ಸರ್ಕಾರ ಆದಷ್ಟು ಬೇಗ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಒದಗಿಸಬೇಕು. ಶಿಕ್ಷಕರ ವರ್ಗಾವಣೆ ಹಾಗೂ ನಿವೃತ್ತಿಯಿಂದ ಉಂಟಾಗಿರುವ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶಾಲೆಯಲ್ಲಿ ನಿರ್ಮಾಣಗೊಂಡ ಶೌಚಾಲಯವನ್ನು ಉದ್ಘಾಟಿಸಿದ ಅವರು, ಶೌಚಾಲಯ ಹಾಗೂ ದುರಸ್ತಿ ಕಾಮಗಾರಿಗಾಗಿ ₹೮ ಲಕ್ಷ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಪಿಎಂಶ್ರೀ ಯೋಜನೆ ಹಾಗೂ ಪಬ್ಲಿಕ್ ಶಾಲೆಗಳ ಉನ್ನತೀಕರಣ ಯೋಜನೆಯಡಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಚಕ್ರಸಾಲಿ, ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ಎಂ.ಎನ್. ಭರಮಗೌಡರ, ಗೀತಾ ಹಳ್ಯಾಳ, ಎಸ್.ಸಿ. ಹಿರೇಮಠ, ಮುತ್ತಣ್ಣ ಹುಬ್ಬಳ್ಳಿ, ಬಸವರಾಜ ಯರಗುಪ್ಪಿ, ಉಮೇಶ ನೇಕಾರ, ಶ್ರೀನಿವಾಸ ಮತ್ತೂರ, ಸೋಮು ಉಮಚಗಿ, ನಾಗರಾಜ ಅಗಡಿ, ಪ್ರದೀಪ ಬೋವಿ, ರವಿ ಸುತಾರ, ಸೋಮು ಹಡಪದ, ತೇಜಶ್ವಿನಿ ಬೆಳವಿಗಿ, ಲಕ್ಷ್ಮವ್ವ ಸಂಶಿ, ಚೈತ್ರಾ ಹೊಂಗಲ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಚ್.ಬಿ. ಸಣ್ಣಮನಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ಕುರಿ, ಜೆ.ಡಿ. ಹರಕೇರಿ ಹಾಗೂ ಉಮೇಶ ನೇಕಾರ ಕಾರ್ಯಕ್ರಮ ನಿರೂಪಿಸಿದರು.
ಹಬ್ಬದ ಸಂಭ್ರಮದಲ್ಲಿ ಶಾಲಾರಂಭೋತ್ಸವ*
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗಳನ್ನು ಹೂವಿನ ಮಾಲೆ, ತೋರಣ, ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. ಬಿಸಿಯೂಟದಲ್ಲಿ ವಿಶೇಷ ಸಿಹಿ ತಯಾರಿಸಲಾಗಿತ್ತು.
“ಮಕ್ಕಳಿಗೆ ನೀಡುವ ಶಿಕ್ಷಣವೇ ಅವರ ಬದುಕಿನ ದೊಡ್ಡ ಆಸ್ತಿ ಮತ್ತು ಭವಿಷ್ಯದ ಬೆಳಕು.”
ಡಾ. ಚಂದ್ರು ಲಮಾಣಿ, ಶಾಸಕ



