ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಕೌಡೇಶ್ವರಿ ನಗರದ ನಿವಾಸಿಗಳು ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ಮಳೆಯ ನಡುವೆಯೇ ಪುರಸಭೆಗೆ ದೌಡಾಯಿಸಿ ಪ್ರತಿಭಟನೆ ನಡೆಸಿದರು.
ಪುರಸಭೆ ಎದುರು ಜಮಾಯಿಸಿದ ನಿವಾಸಿಗಳು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಹಲವು ವರ್ಷಗಳಿಂದ ಮೂಲಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದೇವೆ” ಎಂದು ದೂರಿದರು.
“ನಮ್ಮ ವಾರ್ಡಿನಲ್ಲಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದಾಗ ರಸ್ತೆಗಳು ಸಂಪೂರ್ಣ ಕೆಸರಿನ ಗದ್ದೆಯಾಗುತ್ತವೆ. ಚರಂಡಿ ಇಲ್ಲದೆ ಮಳೆನೀರು ಮನೆಗಳ ಮುಂದೆ ನಿಂತುಕೊಳ್ಳುತ್ತದೆ. ಮಕ್ಕಳು ಹಾಗೂ ವೃದ್ಧರು ಸಂಚಾರ ನಡೆಸುವುದೇ ದುಸ್ತರವಾಗಿದೆ” ಎಂದು ನಿವಾಸಿಗಳು ಅಳಲು ತೋಡಿಕೊಂಡರು.
“ನಾವು ಪ್ರಥಮ ವಾರ್ಡಿನ ನಿವಾಸಿಗಳಾಗಿದ್ದರೂ ಮತದಾನ ಮಾತ್ರ ೮ನೇ ವಾರ್ಡಿಗೆ ಸೇರಿದೆ. ಈ ಕಾರಣದಿಂದ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ನಮ್ಮ ಪ್ರದೇಶದ ಅಭಿವೃದ್ಧಿ ಮರೀಚಿಕೆಯಾಗಿಬಿಟ್ಟಿದೆ” ಎಂದು ಆರೋಪಿಸಿದರು.
ಈ ಕುರಿತು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
“ರಸ್ತೆ, ಚರಂಡಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.
ಮುಖ್ಯಾಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ನಿವಾಸಿಗಳು, “ಶೀಘ್ರದಲ್ಲೇ ಕಾಮಗಾರಿ ಆರಂಭವಾಗದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹನಮಂತಪ್ಪ ಬಾಲೆಹೊಸೂರ, ನಾಗಪ್ಪ ಪೂಜಾರ, ಲಕ್ಷ್ಮಣ ಮುಳಗುಂದ, ಮಂಜಪ್ಪ ಪಡಗೇರಿ, ಬೀರಪ್ಪ ಪೂಜಾರ, ಗಂಗಪ್ಪ ಗೊಜಗೊಜಿ, ಮಲ್ಲಪ್ಪ ಬನ್ನಿ, ಬಸಣ್ಣ ಉಳ್ಳಟ್ಟಿ, ರೇಣವ್ವ ಗೊರವರ, ಲಕ್ಷ್ಮವ್ವ ಕೋರಿ, ರೇಣವ್ವ ಪೂಜಾರ, ಗಂಗಮ್ಮ ಗೊಜಗೊಜಿ, ಸಂಕವ್ವ ಮುಳಗುಂದ, ಶಿವಲೀಲಾ ಬನ್ನಿ, ರೇಣವ್ವ ಕೋರಿ, ಜಯಮ್ಮ ಕುಷ್ಟಗಿ ಹಾಗೂ ಗೌರಮ್ಮ ತಹಶೀಲ್ದಾರ ಸೇರಿದಂತೆ ಕೌಡೇಶ್ವರಿ ನಗರದ ಅನೇಕ ನಿವಾಸಿಗಳು ಭಾಗವಹಿಸಿದ್ದರು.
“ಮೂಲಭೂತ ಸೌಲಭ್ಯಗಳಿಲ್ಲದೆ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು.”
ಕೌಡೇಶ್ವರಿ ನಗರ ನಿವಾಸಿಗಳು



