ಮಲಪ್ಪುರಂ: ಸರ್ಕಾರಿ ಉದ್ಯೋಗಕ್ಕಾಗಿ 20 ವರ್ಷಗಳ ಹಿಂದೆ ಬರೆದಿದ್ದ ಪರೀಕ್ಷೆಯ ಫಲವಾಗಿ ಇದೀಗ ನೇಮಕಾತಿ ಪತ್ರ ಕೈ ಸೇರಿದ ಅಪರೂಪದ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ. ಆದರೆ ನೇಮಕಾತಿ ಪತ್ರ ಬರುವಷ್ಟರಲ್ಲಿ ಅಭ್ಯರ್ಥಿ ಸರ್ಕಾರಿ ಸೇವೆಗೆ ಪ್ರವೇಶಿಸುವ ವಯೋಮಿತಿಯನ್ನೇ ದಾಟಿರುವುದು ವಿಪರ್ಯಾಸವಾಗಿದೆ.
ಮಲಪ್ಪುರಂ ಮೂಲದ 60 ವರ್ಷದ ಅಬ್ದುಲ್ ಮಜೀದ್ ಅವರು 2005ರಲ್ಲಿ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ್ದ ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕರ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರ್ಯಾಂಕ್ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಆದರೆ ಆ ಪಟ್ಟಿ 2008ರಲ್ಲೇ ಅವಧಿ ಮುಗಿಸಿಕೊಂಡಿತ್ತು.
ಆದರೆ ರ್ಯಾಂಕ್ ಪಟ್ಟಿ ರದ್ದಾದ ಸುಮಾರು 18 ವರ್ಷಗಳ ಬಳಿಕ, 2026ರ ಏಪ್ರಿಲ್ 24ರಂದು ಕೇರಳ ಪಿಎಸ್ಸಿ ಮಜೀದ್ ಅವರಿಗೆ ನೇಮಕಾತಿ ಸಲಹಾ ಪತ್ರ ಕಳುಹಿಸಿದೆ. ಎರಡು ದಶಕಗಳ ಹಿಂದೆ ಬರೆದಿದ್ದ ಪರೀಕ್ಷೆಗೆ ಈಗ ಉದ್ಯೋಗ ಅವಕಾಶ ಬಂದಿರುವುದು ಅಚ್ಚರಿ ಮೂಡಿಸಿದೆ.
ಆದರೆ ಅಧಿಕೃತ ದಾಖಲೆಗಳ ಪ್ರಕಾರ ಮಜೀದ್ ಅವರಿಗೆ ಮೇ 27, 2026ರಂದು 60 ವರ್ಷ ಪೂರ್ಣಗೊಂಡಿದೆ. ಹೀಗಾಗಿ ಹೊಸದಾಗಿ ಸರ್ಕಾರಿ ಸೇವೆಗೆ ಸೇರಲು ಅವರು ಅರ್ಹರಾಗಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬೆಳವಣಿಗೆಯಿಂದ ಸಂತೋಷ ಮತ್ತು ನಿರಾಶೆ ಎರಡನ್ನೂ ಅನುಭವಿಸಿರುವ ಮಜೀದ್, ತಮ್ಮ ಪ್ರಕರಣವನ್ನು ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.



