HomeGadag News133 ಕೋಟಿ ಯೋಜನೆಗೆ ಗ್ರೀನ್ ಸಿಗ್ನಲ್?

133 ಕೋಟಿ ಯೋಜನೆಗೆ ಗ್ರೀನ್ ಸಿಗ್ನಲ್?

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: 2026-27ನೇ ಸಾಲಿನ ತಾಲೂಕು ಪಂಚಾಯಿತಿ ಅಧೀನದ ವಿವಿಧ ಇಲಾಖೆಗಳ ಕ್ರಿಯಾಯೋಜನೆಗಾಗಿ 133 ಕೋಟಿ 43 ಲಕ್ಷ 71 ಸಾವಿರ ರೂಪಾಯಿಗಳ ಅನುದಾನ ಪ್ರಸ್ತಾವನೆ ಸಿದ್ಧಪಡಿಸಿರುವುದಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಾಲಯ್ಯನಕೋಟೆ ವಿಶ್ವನಾಥ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವಿಜಯನಗರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಬಿಸಿಎಂ, ಶಿಶು ಅಭಿವೃದ್ಧಿ ಯೋಜನೆ, ಕೃಷಿ, ಪಶು ಸಂಗೋಪನೆ ಹಾಗೂ ತಾಲೂಕು ಪಂಚಾಯಿತಿ ಆಡಳಿತ ಸೇರಿದಂತೆ ವಿವಿಧ ಇಲಾಖೆಗಳ ಅನುದಾನ ಪ್ರಸ್ತಾವನೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ದಿಡಗೂರು ಮಾತನಾಡಿ, ತಾಲೂಕಿನಲ್ಲಿ ಕಾನೂನು ಪದವಿ ಪಡೆದ 12 ನೂತನ ಅಭ್ಯರ್ಥಿಗಳಿಗೆ ತಲಾ 10 ಸಾವಿರ ರೂಪಾಯಿ ಶಿಷ್ಯವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಚೇರಿಯ ಸ್ವಚ್ಛತಾ ಸಾಮಗ್ರಿ ಖರೀದಿಗೆ 11 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು.

ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಕೊಟ್ರೇಶ್ ಮಾತನಾಡಿ, ಸಿಬ್ಬಂದಿ ವೇತನಕ್ಕೆ 32.14 ಲಕ್ಷ ರೂಪಾಯಿ ಸೇರಿದಂತೆ ಇತರೆ ಖರ್ಚುಗಳಿವೆ ಎಂದು ಮಾಹಿತಿ ನೀಡಿದರು.

ಪಶು ಸಂಗೋಪನೆ ಇಲಾಖೆ ಅಧಿಕಾರಿ ಮಾತನಾಡಿ, ಇಲಾಖೆಯ ಕಚೇರಿ ವೆಚ್ಚಕ್ಕೆ 21 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಸಾಗಾಟ ವೆಚ್ಚವನ್ನು ಸಂಬಂಧಪಟ್ಟ ಸಂಸ್ಥೆಗಳೇ ಭರಿಸಬೇಕಿದ್ದರೂ ಇಲಾಖೆಯಿಂದಲೇ ಹಣ ಪಾವತಿಸಿರುವುದನ್ನು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆಯ ವಿಜಯ ನಿಚ್ಚಾಪುರ ಮಾತನಾಡಿ, ತಾಲೂಕಿನಲ್ಲಿ ಸುಮಾರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆ ಇದ್ದು, ಅಂತರ್ ಬೆಳೆಯಾಗಿ ಪಪ್ಪಾಯಿ ಬೆಳೆಯಲಾಗುತ್ತಿದೆ ಎಂದು ಹೇಳಿದರು.

ದಾಳಿಂಬೆ ಬೆಳೆಗಳಿಗೆ ದುಂಡಾಣು ರೋಗ ಬಾಧೆ ಕಂಡುಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರವೀಣ ಮಾತನಾಡಿ, ಇಲಾಖೆಯಲ್ಲಿ ಹಿಂದಿನ ಸಾಲಿನ 1.49 ಕೋಟಿ ರೂಪಾಯಿ ಅನುದಾನ ಬಳಕೆ ಮಾಡಲಾಗಿದೆ ಎಂದು ಹೇಳಿದರು.

ಈ ವೇಳೆ ಇಲಾಖೆಯ ನಾಲ್ವರು ಹೊರಗುತ್ತಿಗೆ ನೌಕರರಿಗೆ ಎರಡು ವರ್ಷಗಳಿಂದ ವೇತನ ಸಿಗದೇ ಇರುವ ವಿಷಯ ಸಭೆಯಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅಥವಾ ಸಹಾಯಕ ಅಭಿಯಂತರ ಸಭೆಗೆ ಹಾಜರಾಗದೇ ದ್ವಿತೀಯ ದರ್ಜೆ ಸಹಾಯಕ ಖಾದರ್ ಖಾನ್ ಅವರನ್ನು ಕಳುಹಿಸಿದ್ದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಬಿ. ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದ್ದು, ಈ ಬಾರಿ 34 ಮಿ.ಮೀ. ಮಳೆಯ ಕೊರತೆ ಉಂಟಾಗಿದೆ ಎಂದು ಹೇಳಿದರು.

ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಹಾಗೂ ಗೊಬ್ಬರಗಳ ಸಮರ್ಪಕ ಸಂಗ್ರಹವಿದ್ದು, ಮಳೆ ಬಂದ ತಕ್ಷಣ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಲೆಕ್ಕಾಧಿಕಾರಿ ತಿಪ್ಪೇಸ್ವಾಮಿ, ಕುದುರಿ ಲಕ್ಷ್ಮೀಬಾಯಿ ಯೋಜನಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲಾ ಇಲಾಖೆಗಳ ಅಭಿವೃದ್ಧಿಗೆ 133 ಕೋಟಿ ರೂಪಾಯಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ”


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!