ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹೊಸ ಶೈಕ್ಷಣಿಕ ವರ್ಷದ ಆರಂಭದೊಂದಿಗೆ ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಶಾಲೆಗಳು ಮಕ್ಕಳ ಕಲರವದಿಂದ ಕಂಗೊಳಿಸಿದವು. ತಳಿರು ತೋರಣ, ಬಣ್ಣಬಣ್ಣದ ಅಲಂಕಾರ, ಪುಷ್ಪವೃಷ್ಟಿ, ಸಿಹಿ ಹಂಚಿಕೆ ಹಾಗೂ ದಾಖಲಾತಿ ಜಾಗೃತಿ ಅಭಿಯಾನಗಳ ಮೂಲಕ ಶಾಲಾ ಪ್ರಾರಂಭೋತ್ಸವವನ್ನು ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು.
ಸಮೀಪದ ತೋಟಗಂಟಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಿ ಮಾತನಾಡಿದ ವೀರನಗೌಡ ಪಾಟೀಲ, ಸರ್ಕಾರಿ ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಪಾಲಕರು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕರೆ ನೀಡಿದರು.
“ಒಂದು ಕಾಲದಲ್ಲಿ ತೋಟಗಂಟಿಯ ಸರ್ಕಾರಿ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ಇಲ್ಲಿ ಕಲಿತ ಅನೇಕರು ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳೂ ಉತ್ತಮ ಶಿಕ್ಷಣ ಪಡೆದು ಗ್ರಾಮ ಹಾಗೂ ಶಾಲೆಗೆ ಕೀರ್ತಿ ತರಬೇಕು” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪಗೌಡ ಪಾಟೀಲ, ನಾಗಭೂಷಣ ಬೆಳವಡಿ, ಕಲ್ಲನಗೌಡ ಹೊನ್ನಪ್ಪಗೌಡ್ರ, ಅಂದಾನಗೌಡ ಹೊನ್ನಪ್ಪಗೌಡ್ರ, ಪತ್ರಕರ್ತ ಶಿವಾನಂದ ಗೋಗೇರಿ, ಮುಖ್ಯಶಿಕ್ಷಕ ಆರ್.ಡಿ. ರಂಗಣ್ಣವರ, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇನ್ನೊಂದೆಡೆ, ಜಕ್ಕಲಿಯ ಪ್ರಾಥಮಿಕ ಶಾಲೆಗಳ ಸಂಕೀರ್ಣದಲ್ಲಿ ಶಾಲಾ ಪ್ರಾರಂಭೋತ್ಸವ ಹಬ್ಬದ ವಾತಾವರಣದಲ್ಲಿ ನಡೆಯಿತು. ಶಾಲೆಯನ್ನು ನವವಧುವಿನಂತೆ ಅಲಂಕರಿಸಲಾಗಿದ್ದು, ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಗುಲಾಬಿ ಹೂವು ನೀಡಿ, ಸಿಹಿ ಹಂಚುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಅಂದಪ್ಪ ಮಾದರ, ಮುಖ್ಯ ಶಿಕ್ಷಕ ಎಸ್.ಬಿ. ಗವಿ, ಹೆಚ್.ಎಸ್. ಬಿಂಗಿ, ಎಸ್.ಎ. ಪಲ್ಲೇದ, ಎಂ.ವಿ. ತಾಳಿಕೋಟಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ಎಸ್‌ಎಜೆಡಿ ಸರ್ಕಾರಿ ಪ್ರೌಢಶಾಲೆಯಲ್ಲಿಯೂ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ ಹಾಗೂ ಪಾಲಕ-ಪೋಷಕರ ಮಹಾಸಭೆ ಅರ್ಥಪೂರ್ಣವಾಗಿ ನಡೆಯಿತು. ಶಾಲೆಗೆ ಆಗಮಿಸಿದ ಮಕ್ಕಳಿಗೆ ಪುಷ್ಪವೃಷ್ಟಿ, ಆರತಿ, ಗುಲಾಬಿ ಹೂವು ಹಾಗೂ ಸಿಹಿ ಹಂಚುವ ಮೂಲಕ ಸ್ವಾಗತಿಸಲಾಯಿತು.
ದಾಖಲಾತಿ ಆಂದೋಲನದ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತಫೇರಿ ನಡೆಸಿ ಶಿಕ್ಷಣದ ಮಹತ್ವ ಸಾರಿದರು. ಮಕ್ಕಳ ಮುಖದಲ್ಲಿದ್ದ ನಗು ಹಾಗೂ ಉತ್ಸಾಹ ಶಾಲಾ ಆವರಣಕ್ಕೆ ಹೊಸ ಚೈತನ್ಯ ತುಂಬಿತ್ತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಸುಜಾತಾ ಕಮ್ಮಾರ, ಮುಖ್ಯಶಿಕ್ಷಕಿ ಎಂ. ಶಾರದಮ್ಮ, ವಿ.ವಿ. ಅಣ್ಣಿಗೇರಿ, ಆರ್.ಡಿ. ಬಡಿಗೇರ, ನೆಹರು ಮನೋಳಿ, ಗೌರಮ್ಮ, ಯು.ಎಸ್. ಕಣವಿ, ಎಸ್.ವಿ. ಗುಗ್ಗರಿ, ಸದಸ್ಯರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
“ಕನ್ನಡ ಮಾಧ್ಯಮದಲ್ಲೇ ಕಲಿತ ಮಕ್ಕಳು ನಾಡಿನ ಸೇವೆಗೆ ಸಿದ್ಧರಾಗಬೇಕು. ಕನ್ನಡ ಶಾಲೆಗಳ ಉಳಿವು ಪ್ರತಿಯೊಬ್ಬರ ಜವಾಬ್ದಾರಿ.”



