ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಕುರಿತು ಅಭಿಮಾನಿಗಳು ಕಾಯುತ್ತಿದ್ದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ. ಖ್ಯಾತ ಗೀತರಚನೆಕಾರ ಯೋಗರಾಜ್ ಭಟ್ ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದ್ದು, ಚಿತ್ರದ ಸಂಗೀತ ವಿಭಾಗದ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ.
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಯೋಗರಾಜ್ ಭಟ್, ‘ಟಾಕ್ಸಿಕ್’ ಚಿತ್ರಕ್ಕಾಗಿ ತಾವು ಮೂರು ಹಾಡುಗಳನ್ನು ಬರೆದಿರುವುದಾಗಿ ತಿಳಿಸಿದ್ದಾರೆ. ‘ಎರಡು-ಮೂರು ಹಾಡುಗಳನ್ನು ಬರೆದಿದ್ದೇನೆ. ಮೂರು ಅಂತಲೇ ಲೆಕ್ಕ. ಯಾವಾಗ ರಿಲೀಸ್ ಆಗುತ್ತವೆ ಎಂಬುದನ್ನು ಕಾದು ನೋಡಬೇಕು’ ಎಂದು ಹೇಳಿದ್ದಾರೆ.
ಚಿತ್ರದ ದೃಶ್ಯಗಳನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಆತ್ಮೀಯ ಗೆಳೆಯನ ಮಹೋನ್ನತ ಸಿನಿಮಾ. ಅಭೂತಪೂರ್ವ ಯಶಸ್ಸು ಸಾಧಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಡುಗಳ ಕೆಲಸಕ್ಕಾಗಿ ತಾವು ಮುಂಬೈಗೆ ತೆರಳಿದ್ದ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ.
ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಹಲವು ಖ್ಯಾತ ಕಲಾವಿದರು ನಟಿಸುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ.
ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಆದರೂ ಚಿತ್ರದ ಪ್ರತಿಯೊಂದು ಅಪ್‌ಡೇಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಇದೀಗ ಯೋಗರಾಜ್ ಭಟ್ ನೀಡಿರುವ ಹೇಳಿಕೆಯಿಂದ ಚಿತ್ರದ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ‘ಟಾಕ್ಸಿಕ್’ ಸಂಗೀತವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ.



