ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನೆಪೋಟಿಸಂ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸ್ಪಷ್ಟ ಮತ್ತು ನೇರ ಉತ್ತರ ನೀಡಿದ್ದಾರೆ. ‘ಮ್ಯಾಂಗೋ ಪಚ್ಚ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ನೆಪೋಟಿಸಂ ಎಂಬ ಪದವನ್ನೇ ಪ್ರಶ್ನಿಸಿದ ಶಿವಣ್ಣ, ಚಿತ್ರರಂಗದಲ್ಲಿ ಉಳಿಯುವುದು ಕುಟುಂಬದ ಹೆಸರಿನಿಂದಲ್ಲ, ಪ್ರತಿಭೆಯಿಂದ ಮಾತ್ರ ಎಂದು ಹೇಳಿದ್ದಾರೆ.
ನಟ ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ನೆಪೋಟಿಸಂ ಚರ್ಚೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಶಿವರಾಜ್‌ಕುಮಾರ್ ಅವರ ಪ್ರತಿಕ್ರಿಯೆ ಕೇಳಿದಾಗ, ‘ನೀವು ಆ ಪ್ರಶ್ನೆಯನ್ನೇ ಯಾಕೆ ಕೇಳುತ್ತೀರಿ? ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ’ ಎಂದು ಖಡಕ್ ಉತ್ತರ ನೀಡಿದರು.
ಚಿತ್ರರಂಗ ಯಾರೊಬ್ಬರ ಖಾಸಗಿ ಆಸ್ತಿ ಅಲ್ಲ ಎಂದು ಹೇಳಿದ ಶಿವಣ್ಣ, ‘ಪ್ರತಿಯೊಬ್ಬರಿಗೂ ಕನಸು ಕಾಣುವ ಹಕ್ಕಿದೆ. ಯಾರ ಮಕ್ಕಳು ಬೇಕಾದರೂ ಸಿನಿಮಾಗೆ ಬರಬಹುದು. ನೀವು ಕೂಡ ಬರಬಹುದು. ಅವಕಾಶ ಎಲ್ಲರಿಗೂ ಇದೆ. ಆದರೆ ಇಲ್ಲಿ ಉಳಿಯುವುದು ಮಾತ್ರ ಪ್ರತಿಭೆ ಇದ್ದರೆ ಮಾತ್ರ’ ಎಂದು ಹೇಳಿದರು.
ಶಿವಣ್ಣ ಅವರ ಈ ಪ್ರತಿಕ್ರಿಯೆ ಕನ್ನಡ ಚಿತ್ರರಂಗದ ಕಾರ್ಯವೈಖರಿಯನ್ನೇ ಪ್ರತಿಬಿಂಬಿಸುತ್ತದೆ. ಬಾಲಿವುಡ್‌ನಲ್ಲಿ ನೆಪೋಟಿಸಂ ದೊಡ್ಡ ಚರ್ಚೆಯ ವಿಷಯವಾಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುದೀಪ್ ಕೂಡ ಶಿವಣ್ಣ ಅವರನ್ನು ಕೊಂಡಾಡಿದ್ದು, ‘ಗ್ರೇಟ್‌ನೆಸ್ ಅಂದ್ರೆ ಇದೇ’ ಎಂದು ಹೇಳುವ ಮೂಲಕ ಅವರ ಉತ್ತರಕ್ಕೆ ಬೆಂಬಲ ಸೂಚಿಸಿದರು.
ಸದ್ಯ ಇಬ್ಬರು ಸ್ಟಾರ್ ನಟರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಪೋಟಿಸಂ ಕುರಿತ ಚರ್ಚೆಗೆ ಹೊಸ ತಿರುವು ನೀಡಿವೆ.



