ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂದಿ ಆಯುವ ವ್ಯಕ್ತಿಯ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಜೂನ್ 2ರಂದು ಪಟ್ಟಂದೂರು ಅಗ್ರಹಾರದಲ್ಲಿ ಘಟನೆ ನಡೆದಿತ್ತು. ಕೋ-ಲಿವಿಂಗ್ ಪಿಜಿಯಲ್ಲಿ ವಾಸವಿದ್ದ ವಿದ್ಯಾರ್ಥಿನಿ ರಾತ್ರಿ ಓದುತ್ತಿದ್ದ ವೇಳೆ ನಿದ್ದೆ ಬರುತ್ತಿದೆ ಎಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಟೀ ಕುಡಿಯಲು ಹೊರಗಡೆ ಹೋಗಿದ್ದರು.
ಟೀ ಕುಡಿದು ವಾಪಸ್ ಪಿಜಿಯತ್ತ ತೆರಳುತ್ತಿದ್ದ ವೇಳೆ ಆರೋಪಿ ಸೈಬುಲ್ ಮಂಡಲ್ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ್ದಾನೆ. ಅಪಾಯವನ್ನು ಅರಿತ ವಿದ್ಯಾರ್ಥಿನಿ ಪಿಜಿಯತ್ತ ಓಡಲು ಯತ್ನಿಸಿದರೂ, ಗೇಟ್ ಸಮೀಪವೇ ಆಕೆಯ ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಬಳಿಕ ವಿದ್ಯಾರ್ಥಿನಿಯನ್ನು ಸಮೀಪದ ಶೆಡ್‌ಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವತಿಯನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ತಕ್ಷಣ ಪಿಜಿ ಮಾಲೀಕರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ನೇಹಿತರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ವರದಿ ಹಾಗೂ ಸಂತ್ರಸ್ತೆಯ ಹೇಳಿಕೆ ಆಧರಿಸಿ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಬಂಧಿತನಾಗಿರುವ ಸೈಬುಲ್ ಮಂಡಲ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.



