ಬೆಳಗಾವಿ: ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಹೂಡಿಕೆದಾರರ ಹಣದಲ್ಲಿ ಸ್ಯಾಂಡಲ್‌ವುಡ್ ತಾರೆಯರನ್ನು ಕರೆಸಿ ಅದ್ದೂರಿ ಕಾರ್ಯಕ್ರಮ ನಡೆಸಲಾಗಿದೆ ಎಂಬ ಅನುಮಾನ ತನಿಖಾ ಸಂಸ್ಥೆಗಳ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಹಲವು ಖ್ಯಾತ ನಟ-ನಟಿಯರಿಗೆ ಸಿಐಡಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.
ಕೋಟ್ಯಂತರ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಶಿವಾನಂದ ನೀಲಣ್ಣವರ್ ಆಯೋಜಿಸಿದ್ದ ‘ಬೆಳಗಾವಿ ಹಬ್ಬ’ ಕಾರ್ಯಕ್ರಮ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣವನ್ನೇ ಕಾರ್ಯಕ್ರಮದ ಖರ್ಚಿಗೆ ಬಳಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಹಣದ ಹರಿವಿನ ಕುರಿತು ಸಿಐಡಿ ಆಳವಾದ ಪರಿಶೀಲನೆ ಆರಂಭಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾಲಿ ಧನಂಜಯ, ಸಪ್ತಮಿ ಗೌಡ, ನೀನಾಸಂ ಸತೀಶ್, ರಾಗಿಣಿ ದ್ವಿವೇದಿ, ದಿಗಂತ್-ಐಂದ್ರಿತಾ ರೈ, ವಶಿಷ್ಠ ಸಿಂಹ ಹಾಗೂ ರಾಜೇಶ್ ಕೃಷ್ಣನ್ ಸೇರಿದಂತೆ ಹಲವರ ಸಂಭಾವನೆ ವಿವರಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಪಾವತಿಗಳು ಯಾವ ಖಾತೆಯಿಂದ ನಡೆದಿವೆ, ಹಣದ ಮೂಲ ಏನು ಎಂಬುದನ್ನು ಪತ್ತೆಹಚ್ಚಲು ಬ್ಯಾಂಕ್ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ ಅವರ ಸೂಚನೆಯಂತೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ವಂಚನೆ ಪ್ರಕರಣದ ಹಣಕಾಸು ವ್ಯವಹಾರಗಳ ಜಾಡು ಹಿಡಿದಿರುವ ಸಿಐಡಿ, ಈಗ ಚಿತ್ರರಂಗದ ಸಂಪರ್ಕಗಳ ಮೇಲೂ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ತನಿಖೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.



