HomeGadag Newsಕರವೇ ಹೋರಾಟಕ್ಕೆ ಮಣಿದ ಪುರಸಭೆ: 7 ಅಂಗಡಿಗಳಿಗೆ ಸೀಲ್!

ಕರವೇ ಹೋರಾಟಕ್ಕೆ ಮಣಿದ ಪುರಸಭೆ: 7 ಅಂಗಡಿಗಳಿಗೆ ಸೀಲ್!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್‌ನಿಲ್ದಾಣದ ಹತ್ತಿರದ ಪುರಸಭೆ ವಾಣಿಜ್ಯ ಮಳಿಗೆಗಳನ್ನು ಕೂಡಲೇ ವಶಕ್ಕೆ ಪಡೆದು ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಬೇಕು. ನಿಯಮ ಮೀರಿ ಮಾಂಸ ಹಾಗೂ ಎಗ್‌ರೈಸ್ ಮಾರಾಟ ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಜಯ ಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಜಂಟಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಅಧ್ಯಕ್ಷ ಶರಣು ಗೋಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯ ಅಧ್ಯಕ್ಷ ಬಸವರಾಜ ಹಿರೇಮನಿ ಹಾಗೂ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಸ್ಮಾಯಿಲ್ ಆಡೂರ, “ಮಳಿಗೆಗಳ ಟೆಂಡರ್ ಅವಧಿ 2023ರಲ್ಲೇ ಮುಗಿದಿದ್ದರೂ ಪುರಸಭೆ ಮರು ಟೆಂಡರ್ ಕರೆಯದೆ ಮಳಿಗೆ ಪಡೆದವರ ತಾಳಕ್ಕೆ ಕುಣಿಯುತ್ತಿದೆ” ಎಂದು ಆರೋಪಿಸಿದರು.

ಒಬ್ಬರೇ ನಾಲ್ಕು ಮಳಿಗೆ ಪಡೆದು ಲಾಭದ ಉದ್ದೇಶದಿಂದ ಬಾಡಿಗೆಗೆ ನೀಡಲಾಗಿದೆ. ಒಟ್ಟು 29 ಮಳಿಗೆಗಳಿದ್ದು, ಬಹುತೇಕರು ನಿಯಮ ಪಾಲಿಸದೇ ಅಂಗಡಿಗಳನ್ನು ನಡೆಸುತ್ತಿದ್ದಾರೆ. ನಿಯಮದ ಪ್ರಕಾರ ವಾಣಿಜ್ಯ ಮಳಿಗೆಗಳಲ್ಲಿ ಮಾಂಸ ಹಾಗೂ ಎಗ್‌ರೈಸ್ ಮಾರಾಟ ನಿಷಿದ್ಧವಾಗಿದ್ದರೂ ಇಲ್ಲಿ ಅದರದ್ದೇ ಅಬ್ಬರ ಹೆಚ್ಚಾಗಿದೆ ಎಂದು ದೂರಿದರು.

“ಮಳಿಗೆ ಸಂಕೀರ್ಣದಲ್ಲಿ ದುರ್ವಾಸನೆ ಆವರಿಸಿದ್ದು, ಮಹಿಳೆಯರು ಹಾಗೂ ಮಕ್ಕಳು ಬರಲು ಸಾಧ್ಯವಾಗುತ್ತಿಲ್ಲ. ಆಹಾರದ ಗುಣಮಟ್ಟ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆ ಸಂಪೂರ್ಣ ನಿರ್ಲಕ್ಷ್ಯಗೊಂಡಿದೆ. ಆಹಾರಕ್ಕೆ ಕೃತಕ ಬಣ್ಣ ಹಾಗೂ ಟೇಸ್ಟಿಂಗ್ ಪೌಡರ್‌ಗಳನ್ನು ಅತಿಯಾಗಿ ಬಳಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಲಕ್ಷಾಂತರ ರೂಪಾಯಿ ಬಾಡಿಗೆ ಸಂಗ್ರಹಿಸಿದರೂ 15-20 ವರ್ಷಗಳಿಂದ ಮಳಿಗೆಗಳಿಗೆ ಸುಣ್ಣ-ಬಣ್ಣ ಅಥವಾ ದುರಸ್ತಿ ಮಾಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಆಶ್ರಯದಿಂದಲೇ ನಿಯಮ ಉಲ್ಲಂಘನೆ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಪುರಸಭೆ ಮಾಜಿ ಸದಸ್ಯ ಅನೀಲ ಮುಳಗುಂದ ಹಾಗೂ ಕೆಲ ಅಂಗಡಿಕಾರರು ಪುರಸಭೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಿಪಿಐ ಬಿ.ವೈ. ನ್ಯಾಮಗೌಡ್ರ, ಪಿಎಸ್‌ಐ ನಾಗರಾಜ ಗಡದ, ಟಿ.ಕೆ. ರಾಠೋಡ ಹಾಗೂ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದರು.

ಹೋರಾಟಗಾರರ ಒತ್ತಡಕ್ಕೆ ಮಣಿದ ಪುರಸಭೆ ಅಧಿಕಾರಿಗಳು

ದಾಖಲೆ ಮತ್ತು ಮಾನ್ಯತೆ ಇಲ್ಲದೇ ನಿಯಮ ಉಲ್ಲಂಘನೆ ನಡೆಸುತ್ತಿದ್ದ 7 ಅಂಗಡಿಗಳನ್ನು ಖಾಲಿ ಮಾಡಿಸಿ ಸೀಜ್ ಮಾಡಿದರು. ಪಟ್ಟಣದ ಮೂರು ವಾಣಿಜ್ಯ ಸಂಕೀರ್ಣಗಳ ಟೆಂಡರ್ ಪ್ರಕ್ರಿಯೆಯನ್ನು ಜುಲೈ ಒಳಗೆ ಪೂರ್ಣಗೊಳಿಸಲಾಗುವುದು. ನಿಯಮ ಉಲ್ಲಂಘಿಸಿದ ಮಳಿಗೆದಾರರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಈ ವೇಳೆ ನಾಗೇಶ ಅಮರಾಪುರ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ರಮೇಶ ಹಂಗನಕಟ್ಟಿ, ಮಾಂತೇಶ ಗುದ್ನಾಳ, ಇಲಿಯಾಸ್ ಮೀರಾನವರ, ಲೋಕೇಶ ಶರಸೂರಿ, ಮೈಲಾರಿ ಹೆಗ್ಗಣ್ಣವರ, ಎನ್.ಎಂ. ಆಡೂರ, ಎಂ.ಕೆ. ಕುಡಚಿ, ಮಹೇಶ ಸೂರಣಗಿ, ವೀರಭದ್ರಯ್ಯ ಮಠಪತಿ, ಪ್ರವೀಣ ಆಚಾರಿ, ನಿಂಗಪ್ಪ ಕುರಟ್ಟಿ, ಇಸಾಕಬಾಷಾ ಹರಪನಹಳ್ಳಿ, ಬಸಣ್ಣ ಮೇಲೇರಿ, ಮೈನು ಮೊಮಿನ್, ಹಾಲಪ್ಪ ಭಂಡಾರಿ, ನಜೀರ ಬಾಗಲಕೋಟ, ಗೌಸ ಜಮಖಂಡಿ, ಬರಕತಲಿ ಮುಳಗುಂದ, ದುದ್ದು ರತನಖಾನ್, ಯಲ್ಲಪ್ಪ ಹಂಜಗಿ, ರಾಜು ಕೆರೆಕೊಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪುರಸಭೆ ಅಧಿಕಾರಿಗಳಾದ ಮಂಜುಳಾ ಹೂಗಾರ, ಮಂಜುನಾಥ ಮುದಗಲ್, ಸುರೇಶ ಪೂಜಾರ ಹಾಗೂ ಹನಮಂತಪ್ಪ ನಂದೆಣ್ಣವರ ಉಪಸ್ಥಿತರಿದ್ದರು.

 “ಪುರಸಭೆ ಮಳಿಗೆಗಳಲ್ಲಿ ನಡೆಯುತ್ತಿರುವ ನಿಯಮ ಉಲ್ಲಂಘನೆ ವಿರುದ್ಧ ಹೋರಾಟ ಮುಂದುವರಿಯಲಿದೆ. ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಲೇಬೇಕು.”

ಶರಣು ಗೋಡಿ

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!