ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕಿರುಕುಳ ನೀಡಲಾಗುತ್ತಿರುವ ಆರೋಪ ಕೇಳಿಬಂದಿದೆ. ಕೆಲವು ದುಷ್ಕರ್ಮಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿ, ಅವರ ವಿರುದ್ಧ ಅವಹೇಳನಕಾರಿ ಹಾಗೂ ಅಸಭ್ಯ ಕಾಮೆಂಟ್ಗಳನ್ನು ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ.
‘ಜಲಗಾರ ಯುನಿವರ್ಸಿಟಿ’ ಎಂಬ ಹೆಸರಿನ ನಕಲಿ ಖಾತೆಗಳ ಮೂಲಕ ವಿಜಯಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ನಿಂದನಾತ್ಮಕ ಪೋಸ್ಟ್ಗಳು ಮತ್ತು ಕಾಮೆಂಟ್ಗಳನ್ನು ಮಾಡಲಾಗುತ್ತಿದೆ.
ವಿಜಯಲಕ್ಷ್ಮಿ ಸಿನಿಮಾ ನೋಡಲು ಹೋದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, “ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ”, “ಅವಳ ಬಾಯ್ಫ್ರೆಂಡ್, ಗಂಡ ಜೈಲಿನಲ್ಲಿ” ಎಂದು ಆಕ್ಷೇಪಾರ್ಹವಾಗಿ ನಿಂದಿಸಿದ್ದಾರೆ. “ಇವಳು ‘Rapid Driver’ ಕಾರಿನಲ್ಲಿ ಓಡಾಡುತ್ತಾಳೆ” ಎಂಬಂತಹ ಸಂದೇಶಗಳನ್ನೂ ಸಹ ಹರಡಲಾಗಿದೆ.
ಈ ರೀತಿ ಅತೀ ಕೆಟ್ಟದಾಗಿ ಕಾಮೆಂಟ್ಗಳನ್ನು ಮಾಡುವ ಜೊತೆಗೆ, ವಿಜಯಲಕ್ಷ್ಮಿ ಅವರು ದೂರು ನೀಡದಂತೆ ‘ವಿಜಿಗೆ ಕಂಪ್ಲೇಂಟ್ ಕೊಡಬೇಡ ಅಂತ ಹೇಳಿ ಪ್ಲೀಸ್’ ಎಂದು ಮನವಿ ಮಾಡುವ ರೀತಿಯಲ್ಲಿ ಒತ್ತಡ ಹೇರಲಾಗುತ್ತಿದೆ.
ಈ ಕುರಿತು ವಿಜಯಲಕ್ಷ್ಮಿ ಅಥವಾ ಅವರ ಕುಟುಂಬದವರು ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ರೀತಿಯ ಕಿರುಕುಳದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



