ಬೆಂಗಳೂರು: ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳನ್ನು ನಿರಂತರವಾಗಿ ಭೇದಿಸುತ್ತಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಇದೀಗ ಭಾರೀ ಪ್ರಮಾಣದ ಚಿನ್ನ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದ್ದಾರೆ. ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನೊಬ್ಬನಿಂದ ₹1.37 ಕೋಟಿ ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ವಶಪಡಿಸಿಕೊಳ್ಳಲಾದ ಚಿನ್ನದ ಒಟ್ಟು ತೂಕ 899.50 ಗ್ರಾಂ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿ ಅತ್ಯಂತ ಕುತಂತ್ರದಿಂದ ಚಿನ್ನವನ್ನು ಸಾಗಿಸಲು ಯತ್ನಿಸಿದ್ದ. ನಾಲ್ಕು ಪ್ರತ್ಯೇಕ ಕ್ಯಾಪ್ಸುಲ್‌ಗಳಲ್ಲಿ ಚಿನ್ನದ ಪೇಸ್ಟ್ ಅಡಗಿಸಿ ಕಳ್ಳಸಾಗಣೆ ಮಾಡಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ವಿಮಾನ ನಿಲ್ದಾಣದಲ್ಲಿ ಆರೋಪಿ ಅನುಮಾನಾಸ್ಪದವಾಗಿ ವರ್ತಿಸಿದ್ದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ತಕ್ಷಣವೇ ಅದನ್ನು ವಶಕ್ಕೆ ಪಡೆದಿದ್ದಾರೆ.
ಕಸ್ಟಮ್ಸ್ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದ್ದು, ಚಿನ್ನದ ಮೂಲ, ಸಾಗಾಟದ ಜಾಲ ಹಾಗೂ ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲದ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



