ಬೆಂಗಳೂರು: ಆರ್‌ಎಸ್‌ಎಸ್ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ. ರವಿ ನೀಡಿದ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಇತಿಹಾಸದ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಟೀಕಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ನೋಂದಣಿ ಮಾಡಿಕೊಳ್ಳುವ ವಿಚಾರದಲ್ಲಿ ಸಂಘ ಪರಿವಾರ ಅನಗತ್ಯ ಆತಂಕ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದರು.
ಸರ್ದಾರ್ ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಆರ್‌ಎಸ್‌ಎಸ್ ನಿಷೇಧಕ್ಕೊಳಗಾದ ಸಂದರ್ಭಗಳಲ್ಲಿ ಸಂಘದ ನಾಯಕರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಆ ಇತಿಹಾಸ ಎಲ್ಲರಿಗೂ ಗೊತ್ತಿದೆ. ಆದರೆ ಈಗ ನೋಂದಣಿ ಮಾಡಿಕೊಳ್ಳಿ ಎಂದರೆ ಏಕೆ ಭಯಪಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ ಅವಧಿಯಲ್ಲಿಯೂ ಸಂಘದ ಪ್ರಮುಖರು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಈ ದೇಶದ ಸಂವಿಧಾನ ಮತ್ತು ಕಾನೂನುಗಳಿಗೆ ನಾವು ಒಳಪಡುವುದಿಲ್ಲ ಎಂದು ಯಾರಾದರೂ ಹೇಳಬಹುದೇ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಬೀದಿ ವ್ಯಾಪಾರಿಯಿಂದ ಹಿಡಿದು ದೇವಾಲಯಗಳವರೆಗೆ ಪ್ರತಿಯೊಂದು ಸಂಸ್ಥೆಯೂ ನೋಂದಣಿ ಮಾಡಿಸಿಕೊಳ್ಳಬೇಕು. ಎಲ್ಲರೂ ತಮ್ಮ ಆದಾಯ-ವೆಚ್ಚದ ಲೆಕ್ಕವನ್ನು ನೀಡಬೇಕು. ಹಾಗಿದ್ದರೆ ಆರ್‌ಎಸ್‌ಎಸ್ ಮಾತ್ರ ಏಕೆ ಲೆಕ್ಕ ನೀಡಬಾರದು? ದೇಣಿಗೆಗಳ ಮೂಲ ಮತ್ತು ವೆಚ್ಚಗಳ ಬಗ್ಗೆ ಪಾರದರ್ಶಕತೆ ಇರಬಾರದೆ? ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಹಾಗೂ ಅದರ ಇತಿಹಾಸದ ಬಗ್ಗೆ ಹಲವು ದಾಖಲೆಗಳಿವೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಸಂಘದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.



