ಬೆಂಗಳೂರು: ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಂತ್ರಸ್ತೆ ಹಾಗೂ ಆಕೆಯ 10 ತಿಂಗಳ ಮಗುವಿನ ನಿರ್ವಹಣೆಗೆ ಹಣ ಪಾವತಿಸದ ಹಿನ್ನೆಲೆ ನ್ಯಾಯಾಲಯ ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಸಂತ್ರಸ್ತೆ ಮತ್ತು ಮಗುವಿನ ನಿರ್ವಹಣೆಗೆ 75 ಸಾವಿರ ರೂಪಾಯಿ ಠೇವಣಿ ಇಡಲು ನೀಡಿದ್ದ ಮಧ್ಯಂತರ ಆದೇಶವನ್ನು ಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದರು. “ಮಗು ಕೆಳವರ್ಗದ ಕುಟುಂಬದಲ್ಲಿ ಜನಿಸಿದೆ ಎಂಬ ಕಾರಣಕ್ಕೆ ಅದನ್ನು ಕೈಬಿಡಲು ಸಾಧ್ಯವಿಲ್ಲ. ನಿಮ್ಮ ಕೃತ್ಯದಿಂದ ಮಗು ಜನಿಸಿದೆ. ಅದರ ಜವಾಬ್ದಾರಿ ತೆಗೆದುಕೊಳ್ಳಲೇಬೇಕು” ಎಂದು ಕಠಿಣವಾಗಿ ಹೇಳಿದ್ದಾರೆ.
ಆರೋಪಿಯ ಪರ ವಕೀಲರು, ಕೃಷ್ಣ ಜೆ. ರಾವ್ ವಿದ್ಯಾರ್ಥಿಯಾಗಿರುವುದರಿಂದ ನ್ಯಾಯಾಲಯದ ಷರತ್ತು ಪಾಲಿಸಲು ಸಾಧ್ಯವಾಗಿಲ್ಲ ಎಂದು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “75 ಸಾವಿರ ರೂಪಾಯಿ ನೀಡಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ತಂದೆ ಇದ್ದಾರಲ್ಲ. ಹಣ ಪಾವತಿಸದಿದ್ದರೆ ಅರ್ಜಿಗಳನ್ನು ವಜಾಗೊಳಿಸುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ಸಂತ್ರಸ್ತೆಯ ಪರ ವಕೀಲರು, ಬ್ಯಾಂಕ್ ಖಾತೆ ವಿವರಗಳನ್ನು ಈಗಾಗಲೇ ನೀಡಲಾಗಿದ್ದರೂ ಹಣ ವರ್ಗಾವಣೆ ಮಾಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಮೊದಲ ಕಂತಿನ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದರೂ ಅದರ ಮಾಹಿತಿ ಸಂತ್ರಸ್ತೆಗೆ ನೀಡಿಲ್ಲ ಎಂಬುದನ್ನೂ ತಿಳಿಸಿದರು.
ಈ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ, “ಇದು ಕೇವಲ ಇಬ್ಬರ ನಡುವಿನ ಸಂಬಂಧದ ವಿಚಾರವಲ್ಲ. ಆ ಸಂಬಂಧದಿಂದ ಒಂದು ನಿರಪರಾಧಿ ಮಗು ಜನಿಸಿದೆ. ಅದರ ಬದುಕಿನ ಜವಾಬ್ದಾರಿಯಿಂದ ಹೇಗೆ ತಪ್ಪಿಸಿಕೊಳ್ಳುತ್ತೀರಿ?” ಎಂದು ಪ್ರಶ್ನಿಸಿದರು.
ಇದೇ ವೇಳೆ, ಇದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 69ರ ಅಡಿಯಲ್ಲಿ ಮದುವೆಯ ಸುಳ್ಳು ಭರವಸೆಗೆ ಸಂಬಂಧಿಸಿದ ಸ್ಪಷ್ಟ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅರ್ಜಿಗಳು ವಜಾಗೊಳ್ಳುವ ಸಾಧ್ಯತೆ ಇದೆ ಎಂದು ಸೂಚಿಸಿತು. ಆದರೆ ಪ್ರಕರಣದ ಮೂಲ ವಿಚಾರಗಳ ಕುರಿತು ವಾದ ಮಂಡಿಸಲು ಅವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.



