ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜೈಲು ಜೀವನ ಇದೀಗ ಕುತೂಹಲದ ವಿಷಯವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಸಿಗದ ಹಿನ್ನೆಲೆ ದರ್ಶನ್ ಸಂಪೂರ್ಣ ಮೌನವಾಗಿದ್ದರೆ, ಪವಿತ್ರಾ ಗೌಡ ತಮ್ಮ ಜೀವನ ಕಥೆಯನ್ನು ಬರೆಯುವ ಮೂಲಕ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಪ್ರಮುಖ ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿರುವ ಕಾರಣ ಜಾಮೀನು ಕೋರಿ ದರ್ಶನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನಿರಾಕರಿಸಿ, ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ. ಈ ಬೆಳವಣಿಗೆಯ ಬಳಿಕ ದರ್ಶನ್ ಜೈಲಿನಲ್ಲಿ ಹೆಚ್ಚು ಏಕಾಂತವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ವಾರಕ್ಕೊಮ್ಮೆ ನೀಡಲಾಗುವ ಪುಸ್ತಕಗಳನ್ನು ಓದುತ್ತಾ ದಿನ ಕಳೆಯುತ್ತಿದ್ದಾರೆ. ಸಹ ಕೈದಿಗಳು ಹಾಗೂ ಇತರರೊಂದಿಗೆ ಹೆಚ್ಚು ಸಂಭಾಷಣೆ ನಡೆಸದೆ ತಮ್ಮಷ್ಟಕ್ಕೆ ತಾವು ಇರುವುದಾಗಿ ಮೂಲಗಳು ಹೇಳುತ್ತಿವೆ.
ಇನ್ನೊಂದೆಡೆ ಪವಿತ್ರಾ ಗೌಡ ಕಳೆದ ಕೆಲ ವಾರಗಳಿಂದ ಆತ್ಮಚರಿತ್ರೆ ಬರೆಯುವ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಜೈಲಾಡಳಿತದಿಂದ ಪಡೆದ ಬಿಳಿ ಹಾಳೆ ಮತ್ತು ಪೆನ್ಸಿಲ್ ಬಳಸಿ ತಮ್ಮ ಜೀವನದ ವಿವಿಧ ಹಂತಗಳನ್ನು ದಾಖಲಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯೋಗ ಸೇರಿದಂತೆ ಜೈಲಿನ ಕೆಲವು ಚಟುವಟಿಕೆಗಳಿಂದಲೂ ದೂರ ಉಳಿದಿರುವ ಪವಿತ್ರಾ ಗೌಡ, ಹೆಚ್ಚಿನ ಸಮಯವನ್ನು ಬರವಣಿಗೆಯಲ್ಲೇ ಕಳೆಯುತ್ತಿದ್ದಾರೆ ಎನ್ನಲಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿರುವ ನಡುವೆ ಇಬ್ಬರು ಆರೋಪಿಗಳ ಜೈಲು ದಿನಚರಿ ವಿಭಿನ್ನ ಸ್ವರೂಪ ಪಡೆದುಕೊಂಡಿದೆ.



